ಫಸಲ್ ಬೀಮಾ ಯೋಜನೆಯಿಂದ ರೈತರಿಗೆ ಮೋಸ: ಶಾಸಕ ಶಿವಲಿಂಗೇಗೌಡ

Update: 2018-12-14 17:45 GMT

ಬೆಳಗಾವಿ, ಡಿ.14: ಬೆಳೆ ವಿಮೆ ಏಜೆಂಟರುಗಳಿಂದ ರೈತರಿಗೆ ಮೋಸವಾಗುತ್ತಿದೆ. ಇಂತಹ ಬೆಳೆವಿಮೆ ಕಂಪನಿಗಳು ರೈತರಿಗೆ ಕೆಟ್ಟದು ಮಾಡುವುದೇ ಉದ್ದೇಶವಾಗಿಟ್ಟುಕೊಂಡಿರುತ್ತಾರೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಕಿಡಿಕಾರಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ಸಂದಭದಲ್ಲಿ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿಯಲ್ಲಿ ವಿಮಾ ಪರಿಹಾರ ಹಣ ರೈತರಿಗೆ ಬಾರದೇ ಇರುವುದರ ಕುರಿತು ವಿಷಯ ಪ್ರಸ್ತಾಪಿಸಿದ ಅವರು, ಬೆಳೆವಿಮೆ ಕಂಪನಿಗಳು ರೈತರಿಗೆ ಮೋಸ ಮಾಡುತ್ತಿವೆ. ಆದ್ದರಿಂದ ಜಂಟಿ ಫಸಲ್ ಬಿಮಾ ಯೋಜನೆ ಕೂಡಲೇ ಕೈಬಿಡಬೇಕಾದ ಅಗತ್ಯವಿದೆ ಎಂದು ಆಗ್ರಹಿಸಿದರು.

ಶಿವಲಿಂಗೇಗೌಡ ಅವರ ಮಾತಿಗೆ ದನಿಗೂಡಿಸಿದ ಶಾಸಕ ಅರಗ ಜ್ಞಾನೇಂದ್ರ, ಫಸಲ್ ಬೀಮಾ ಕಂಪನಿಗಳಿಂದ ಬಹಳ ದೊಡ್ಡ ಮೋಸ ಆಗುತ್ತಿದೆ. ಸರಕಾರ ಬೆಳೆಗಳಿಗೆ ವಿಮೆ ನೀಡಬೇಕು ಎನ್ನುವ ಉದ್ದೇಶ ಸಮರ್ಪಕವಾಗಿದೆ. ಆದರೆ ಅಧಿಕಾರಿಗಳು ಹಾಗೂ ಏಜೆಂಟರುಗಳು ಶಾಮೀಲಾಗಿ ಮೋಸವನ್ನು ಮಾಡುತ್ತಿದ್ದಾರೆ ಎಂದರು.

ಶಾಸಕಿ ಆರ್. ಪೂರ್ಣೀಮಾ ಅವರು ಮಧ್ಯಪ್ರವೇಶಿಸಿ, ಚಿತ್ರದುರ್ಗದಲ್ಲಿ ರೈತರು 121 ಕೋಟಿ ರೂಪಾಯಿಗಳಷ್ಟು ಬೆಳೆವಿಮೆ ಕಟ್ಟಿದ್ದರೆ ಅವರಿಂದ ಬಂದಿದ್ದು 21 ಕೋಟಿ ರೂಪಾಯಿ ಮಾತ್ರ. ಇದರಿಂದ ಭಾರಿ ಮೋಸ ಆಗುತ್ತಿದೆ ಎಂದು ಕಿಡಿಕಾರಿದರು. ಈ ವೇಳೆ ಮಧ್ಯೆಪ್ರವೇಶಿಸಿದ ಶಾಸಕ ಶ್ರೀನಿವಾಸ ಗೌಡ, ಎಲ್ಲ ಬೆಳೆವಿಮೆ ಕಂಪನಿಗಳ ಮೇಲೂ ಆರೋಪ ಮಾಡುವುದು ಸರಿಯಲ್ಲ. ನಾನೂ ಬೆಳೆವಿಮೆ ಕಂಪನಿಯಲ್ಲಿದ್ದೇನೆ. ಯಾರೋ ಒಬ್ಬಿಬ್ಬರಿಂದ ಸಮಸ್ಯೆ ಆಗಿರಬಹುದು. ಆದರೆ ಅದಕ್ಕೆ ಪ್ರತಿಯಾಗಿ ಎಲ್ಲ ಬೆಳೆ ವಿಮಾ ಕಂಪನಿಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ಹಾಸನದಲ್ಲಿ ಗೋಪಾಲ್ ಎಂಬ ಕಂಪನಿಯಿಂದ ಬೆಳೆವಿಮೆ ಕುರಿತು ಮೋಸ ನಡೆಯುತ್ತಿದೆ. ನಾನು ನನ್ನ ಕ್ಷೇತ್ರದನ್ನು ಬಹಿರಂಗವಾಗಿಯೇ ಹೇಳುತ್ತಿದೇನೆ. ನಾನು ಹೇಳಿದ್ದು ಸುಳ್ಳಾದರೆ ಶಿಕ್ಷೆಗೆ ಗುರಿಯಾಗುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸಭಾಧ್ಯಕ್ಷ ರಮೇಶ್‍ ಕುಮಾರ್, ಇನ್ಶೂರೆನ್ಸ್, ಅಶ್ಯೂರೆನ್ಸ್ ಹಾಗೂ ಅಶ್ಯೂರ್ ಎಂಬ ಪದಗಳನ್ನು ಸರಿಯಾಗಿ ಅರ್ಥೈಸುವ ಅಗತ್ಯವಿದೆ. ಇವುಗಳು ಏನು ಎನ್ನುವುದು ಸ್ಪಷ್ಟವಾಗಬೇಕಿದೆ. ಬೆಳೆ ವಿಮೆ ಎನ್ನುವುದು ಉದ್ಯಮವಾಗಿ ಬದಲಾಗುತ್ತಿದೆ. ಎಲ್ಲ ಕಂಪನಿಗಳಿಂದಲೂ ಮೋಸ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮೋಸ ಮಾಡಿದ ಕಂಪನಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಕೃಷಿ ಸಚಿವರಿಗೆ ಸಲಹೆ ನೀಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News