ಜನಸಂಸ್ಕೃತಿಯ ಆಹಾರ ಪದ್ಧತಿಗಳ ಮೇಲೆ ದಾಳಿ

Update: 2018-12-15 11:11 GMT

 ಮೋದಿ ಸರಕಾರದ ನಾಲ್ಕೂವರೆ ವರ್ಷಗಳ ಆಡಳಿತದ ಅವಧಿಯಲ್ಲಿ ನಮ್ಮ ಸಾಮಾನ್ಯ ಜನತೆ ಅದರ ಬಗೆಗೆ ಕಟ್ಟಿಕೊಂಡಿದ್ದ ಕನಸುಗಳ ಸೌಧಗಳು ಕುಸಿಯತೊಡಗಿವೆ. ಆದರೆ ಅನೇಕ ಮಂದಿಯ ಸ್ವಪ್ನಗಳ ಭವನಗಳು ಸಾಕಾರಗೊಂಡಿವೆ ಎನ್ನಲೂಬಹುದು! ವಾಸ್ತವಗಳ ಸುಡು ಬಿಸಿಲಿಗಿಂತ ಕನಸುಗಳ ಪೂರ್ಣಿಮೆಯ ತಂಪು ಆಪ್ಯಾಯಮಾನವಾಗಿ ಕಾಣುತ್ತದೆ. ಫ್ಯಾಂಟಸಿ ಲೋಕದ ವಿಶಿಷ್ಟ ವೈಚಿತ್ರ್ಯವೆಂದರೇ ಇದೇ ಅಲ್ಲವೇ?

ಇರಲಿ...ಸಂಸ್ಕೃತಿಯ ಬಗೆಗೆ ಚಿಂತನ-ಮಂಥನ ಮಾಡಿದಾಗ, ಅದರ ಸಮ್ಮ್ಮಿಳಿತ ಆಯಾಮದ ಅನನ್ಯತೆ ಅರಿವಾಗುತ್ತದೆ. ಧರ್ಮಗಳು, ಜನಾಂಗಗಳು, ಭಾಷೆಗಳು, ಆಚಾರ-ವಿಚಾರಗಳು, ಉಡುಗೆ-ತೊಡುಗೆಗಳು ಮುಂತಾದ ವೈವಿಧ್ಯಗಳಿಂದ ಸಂರಚನೆಗೊಳ್ಳುವ ಜನಸಂಸ್ಕೃತಿಯ ಪ್ರಧಾನ ಭೂಮಿಕೆಯಲ್ಲಿ ಆಹಾರದ್ದೂ ಗಮನೀಯ ಪಾತ್ರ. ಆಹಾರ ಸಂಸ್ಕೃತಿಗೆ ವೈಯಕ್ತಿಕ ಆಯಾಮವೂ ಇದೆ; ಸಾರ್ವಜನಿಕ ಕೂಡ. ದೇಶವೊಂದರ ಪ್ರದೇಶದಲ್ಲಿ ಒಂದು ಆಹಾರ ವಿಶಿಷ್ಟವೆನಿಸಬಹುದಾದ ಸ್ಥಾನವನ್ನು ಪಡೆದಿರಬಹುದು. ಆದರೆ ಅಲ್ಲಿ ಜೀವಿಸುವ ಮಂದಿಯ ಆಹಾರಗಳ ಆಯ್ಕೆಗಳಿಗೆ ಬಹು ಆಯಾಮಗಳಿರುತ್ತವೆ. ‘ಫುಡ್ ಈಸ್ ಎ ಹ್ಯಾಬಿಟ್’ ಎಂಬ ಹೇಳಿಕೆ ಕೂಡ ಈ ಆಹಾರ ಸಂಸ್ಕೃತಿಯ ಜೊತೆ ತಳಕು ಹಾಕಿಕೊಂಡಿದೆ.

ಹೇಳಿಕೇಳಿ ನಮ್ಮದು ಜಾತಿ-ಸಮೃದ್ಧ ದೇಶ! ಜಾತಿ ವ್ಯವಸ್ಥೆಯಲ್ಲಿ ಆಹಾರವೂ ತರತಮ ಭಾವವನ್ನು ಜೊತೆಯಲ್ಲಿ ಸ್ಥಾನವನ್ನು ಸೃಷ್ಟಿಸುತ್ತದೆ. ಸ್ವಾತಿಕ, ತಾಮಸಿಕ ಎಂಬಿತ್ಯಾದಿ ಪರಿಕಲ್ಪನೆಗಳು ಆಹಾರದ ಜೊತೆ ಮಿಳಿತಗೊಂಡಿವೆ. ಜೊತೆಗೆ ಶ್ರೇಷ್ಠತೆಯ ವ್ಯಸನವೂ ಕೂಡ. ಆಹಾರದ ಸೇವನೆಯ ಮೇಲೆ ಒಳ್ಳೆಯವರು, ಕೆಟ್ಟವರು ಎಂಬ ಮಾನದಂಡವನ್ನು ಅನೇಕ ಪ್ರಜ್ಞಾವಂತರೆನಿಸಿಕೊಂಡವರೂ ಬಳಸುತ್ತಾರೆ! ಜಾತಿ ಶ್ರೇಣೀಕರಣದಲ್ಲಿ ಆಹಾರದ ಪಾತ್ರವೂ ಇದೆ ಎಂಬುದು ಗಮನೀಯ ವಿಚಾರ.

ಆದಿಮ ಸಮಾಜದಲ್ಲಿ ಮಾಂಸ ಭಕ್ಷಣೆ ಸಾಮಾನ್ಯ ವಿಷಯವಾಗಿತ್ತು. ಮೊದಲು ಹಸಿ ಮಾಂಸ ಭುಜಿಸುತ್ತಿದ್ದ ಮಾನವ ಬೆಂಕಿಯ ಆವಿಷ್ಕಾರದ ನಂತರ ಬೇಯಿಸಿದ ಮಾಂಸವನ್ನು ಚಪ್ಪರಿಸತೊಡಗಿದ. ಗೋಮಾಂಸ ಸೇವನೆ ಕೂಡ ನಮ್ಮ ಪುರಾತನರ ಆಹಾರ ಸಂಸ್ಕೃತಿಯಲ್ಲಿ ಗಮನಾರ್ಹ ಸ್ಥಾನವನ್ನು ಪಡೆದಿತ್ತು. ಯಜ್ಞಯಾಗಾದಿಗಳಲ್ಲಿ ಪ್ರಾಣಿಬಲಿಯ ಪದ್ಧತಿಯಿತ್ತು. ಕರುವಿನ ನಾಲಿಗೆಗೆ ವಿಶೇಷ ಬೇಡಿಕೆಯಿತ್ತು. ಮನೆಗೆ ಬಂದ ಅತಿಥಿಗಳಿಗೆ ಗೋಮಾಂಸದ ಅಡುಗೆ ಮಾಡುವುದು ಸಾಮಾನ್ಯವಾಗಿ ಕಂಡು ಬರುವ ಸಂಗತಿಯಾಗಿತ್ತು; ಗೌರವದ ಸಂಕೇತವೂ ಕೂಡ. ಅವರನ್ನು ಗೋಘ್ನ ಎಂದು ಕರೆಯಲಾಗುತ್ತಿತ್ತು.
ಬ್ರಿಟಿಷರ ದಾಸ್ಯದ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಗೋರಕ್ಷಣೆಯಂತಹ ವಿಚಾರಗಳು ಹಿಂದೂಗಳನ್ನು ಒಂದುಗೂಡಿಸಲು ಭಾವನಾತ್ಮಕವಾಗಿ ಬಳಸಲಾಯಿತು. ಬ್ರಿಟಿಷರು ಗುಂಡುಗಳಿಗೆ ಗೋ/ಹಂದಿ ಮಾಂಸವನ್ನು ಸವರಿದ್ದಾರೆಂಬ ಸುದ್ದಿ ಸಿಪಾಯಿ ದಂಗೆಯ ಉಗಮದ ಕಾರಣಗಳಲ್ಲಿ ಒಂದು ಎನ್ನಲಾಗುತ್ತದೆ. ಮಹಾತ್ಮಾ ಗಾಂಧೀಜಿಯವರು ಗೋರಕ್ಷಣೆಯ ಬಗೆಗೆ ಖಚಿತವಾದ ನಿಲುವನ್ನು ಹೊಂದಿದ್ದರು. ಆದರೆ ಗೋಮಾಂಸ ಸೇವಿಸುವವರ ಮೇಲೆ ಅವರು ಸಮರವನ್ನು ಸಾರಲಿಲ್ಲ.

ನಮ್ಮಲ್ಲಿ ಅನೇಕರಿಗೆ ಮುಸಲ್ಮಾನರು, ಕ್ರಿಶ್ಚಿಯನ್ನರು ಮಾತ್ರ ಗೋಮಾಂಸವನ್ನು ಸೇವಿಸುತ್ತಾರೆ ಎಂಬ ಅಭಿಪ್ರಾಯವಿದೆ. ಆದರೆ ಅದನ್ನು ಹೆಚ್ಚಾಗಿ ದಲಿತರೂ ಸೇವಿಸುತ್ತಾರೆ. ಇತರ ಮಾಂಸಗಳಷ್ಟು ಗೋಮಾಂಸ ತುಟ್ಟಿಯಲ್ಲ ಎನ್ನುವುದು ಇದಕ್ಕೆ ಒಂದು ಪ್ರಮುಖ ಕಾರಣ.

ಒಟ್ಟಿನಲ್ಲಿ ನಮ್ಮ ಭಾರತೀಯರ ಊಟದ ತಟ್ಟೆಗಳಲ್ಲಿ ಮಾಂಸಾಹಾರ ಪ್ರಧಾನ ಸ್ಥಾನವನ್ನು ಪಡೆದಿದೆ. ಒಂದು ಅಂದಾಜಿನ ಅನ್ವಯ ನಮ್ಮಲ್ಲಿ ಶೇ. 70ಕ್ಕಿಂತಲೂ ಹೆಚ್ಚು ಮಂದಿ ಮಾಂಸಾಹಾರಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ತೆಗೆದುಕೊಳ್ಳಲು ಹವಣಿಸುತ್ತಿರುವ ಆಹಾರದ ಸೇವನೆ ಬಗೆಗಿನ ಕ್ರಮದತ್ತ ಗಮನವನ್ನು ಹರಿಸೋಣ.

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಅಲಹಾಬಾದ್ ನಗರವನ್ನು ಪ್ರಯಾಗ್‌ರಾಜ್ ಎಂದು ಪುನರ್ನಾಮಕರಣಗೊಳಿಸಲಾಯಿತು. ಹಾಗೆಯೇ ಫೈಝಾಬಾದ್ ಜಿಲ್ಲೆ ಅಯೋಧ್ಯಾ ಆಯಿತು. ಇದಾದದ್ದು ಅಯೋಧ್ಯೆಯಲ್ಲಿ ಜರೂರಾಗಿ ರಾಮಮಂದಿರ ಕಟ್ಟುವುದು ಜ್ವಲಂತ ವಿಷಯ ಎಂಬುದು ಜನಮಾನಸದಲ್ಲಿ ನೆಲೆಗೊಳಿಸಬೇಕೆಂಬ ಹಿನ್ನೆಲೆಯಲ್ಲಿ ಎಂದು ಗಮನಿಸಬೇಕು.

ಕೆಲವು ದಿನಗಳ ಹಿಂದೆ, ಉತ್ತರಪ್ರದೇಶ ಸರಕಾರದಲ್ಲಿ ಸಚಿವ ಹಾಗೂ ಅದರ ವಕ್ತಾರರಾಗಿರುವ ಶ್ರೀಕಾಂತ್ ಶರ್ಮ, ಅಯೋಧ್ಯೆ ಮತ್ತು ಮಥುರಾ ಜಿಲ್ಲೆಗಳಲ್ಲಿ ಮಾಂಸಾಹಾರ, ಮದ್ಯದ ಸೇವನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಸರಕಾರ ಯೋಜಿಸುತ್ತಿದೆ ಎಂದು ತಿಳಿಸಿದರು. ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಆ ಎರಡು ಜಿಲ್ಲೆಗಳ ಕೆಲವು ಸ್ಥಳ ಮತ್ತು ಪ್ರದೇಶಗಳಲ್ಲಿ ಪರಿಮಿತಿಗಳನ್ನು ಹಾಕಲಾಗಿದೆ. ಸ್ಥಳೀಯ ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ಹಾಗೂ ಕೋಟಿ ಕೋಟಿ ಜನರು ಅಯೋಧ್ಯೆ ಮತ್ತು ಮಥುರಾದಲ್ಲಿ ಈ ರೀತಿಯ ನಿಷೇಧವನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅವರ ಬೇಡಿಕೆಗಳನ್ನು ಗೌರವಿಸುತ್ತ, ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಜಾರಿಮಾಡಲು ಸನ್ನದ್ಧವಾಗಿದೆ ಎಂಬ ಮಾಹಿತಿಯನ್ನು ಅವರು ನೀಡಿದರು.

ಆದರೆ ಈ ಪರಿಯ ಕ್ರಮಗಳು ಎಷ್ಟು ಸರಿ ಎಂಬುದು ಚರ್ಚಾಸ್ಪದ ವಿಚಾರ. ದೇವರ ಭಕ್ತಿಗೂ ಒಬ್ಬ ಭಕ್ತ ಭುಜಿಸುವ ಆಹಾರಕ್ಕೂ ಸಂಬಂಧವಿದೆಯೇ? ಆಹಾರ ಸೇವನೆ ವ್ಯಕ್ತಿಯೊಬ್ಬನ ಖಾಸಗಿ ವಿಷಯ ಹಾಗೂ ವೈಯಕ್ತಿಕ ನಿರ್ಧಾರ. ಸರಕಾರಗಳು ತಮಗೆ ತೋಚಿದಂತೆ, ತಮ್ಮ ಅನಕೂಲಕ್ಕೆ ತಕ್ಕಂತೆ ಮೇಲೆ ತಿಳಿಸಿರುವ ನಿಷೇಧವನ್ನು ಹೇರುವುದು ನ್ಯಾಯವೇ? ರಾಮ, ಕೃಷ್ಣ ಅಥವಾ ಇನ್ಯಾವುದೇ ದೇವರ ಭಕ್ತನಾಗಲೂ ಯಾವುದೇ ವ್ಯಕ್ತಿ ಸಸ್ಯಹಾರಿಯಾಗಬೇಕಿಲ್ಲ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಏನನ್ನು ತಿನ್ನಬೇಕು ಅಥವಾ ತಿನ್ನಬಾರದು ಎಂದು ನಿರ್ಧರಿಸುವುದು ಜನವಿರೋಧಿ ನಿಲುವಾಗುತ್ತದೆ.

ಪ್ರಸ್ತುತ ಸುದ್ದಿಯಲ್ಲಿರವ ಈ ಎರಡು ಜಿಲ್ಲೆಗಳಲ್ಲಿ ಮಾಂಸಾಹಾರಿಗಳ ಸಂಖ್ಯೆ ಜಾಸ್ತಿಯಿರುವ ಸಾಧ್ಯತೆಗಳಿವೆ. ಅವರಲ್ಲಿ ಹೆಚ್ಚಿನ ಮಂದಿ ದಲಿತರು, ಮುಸಲ್ಮಾನರು, ಕ್ರಿಶ್ಚಿಯನ್ನರು ಹಾಗೂ ದುರ್ಬಲ ವರ್ಗಗಳಿಗೆ ಸೇರಿದವರಾಗಿರುತ್ತಾರೆ. ಹೀಗಿರುವಾಗ, ಸರಕಾರ ಅವರ ಆಹಾರದ ಹಕ್ಕನ್ನು ಮೊಟಕುಗೊಳಿಸುವುದರ ಮೂಲಕ ಅವರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವಂತೆ ಮಾಡುವುದು ಪ್ರಜಾತಂತ್ರ ವಿರೋಧಿ ಕ್ರಮವಾಗುವುದಿಲ್ಲವೇ? ಈ ರೀತಿಯ ನಿಷೇಧದಿಂದ ಸಂಸ್ಕೃತಿ ರಕ್ಷಕರೆಂಬ ಹಣೆಪಟ್ಟಿ ಹಾಕಿಕೊಳ್ಳುವ, ಗುಂಪು ದಾಳಿಗಳಲ್ಲಿ ನಿರತರಾಗುವ ಪುಂಡರಿಗೆ ಕುಮ್ಮಕ್ಕು ನೀಡಿದಂತಾಗುವುದಿಲ್ಲವೇ?

ಗೋಮಾಂಸದ ಸೇವನೆಯ ವಿಚಾರದಲ್ಲಿ ನಮ್ಮ ದೇಶಾದ್ಯಂತ ಗುಂಪುದಾಳಿಗಳು ಜರುಗಿರುವುದು, ಜರುಗುತ್ತ ಇರುವುದು ನಮ್ಮ ನೆನಪುಗಳಲ್ಲಿ ಹಸಿರಾಗಿಯೇ ಇವೆ. ಅಲ್ಲದೆ, ಈ ನಿರ್ಬಂಧದ ಕ್ರಮದಿಂದ ಅನೇಕರು ತಮ್ಮ ಕೆಲಸಗಳನ್ನು ಕಳೆದುಕೊಳ್ಳುತ್ತಾರೆ; ಅತಂತ್ರ ನಾಳೆಗಳಿಗೆ ತುತ್ತಾಗುತ್ತಾರೆ. ಇದು ಅವರ ಕೆಲಸ ಮಾಡುವ ಹಕ್ಕಿನ ಮೇಲಿನ ಪ್ರಹಾರವೂ ಆಗುತ್ತದೆ. ಪ್ರವಾಸೋದ್ಯಮ ಹಾಗೂ ಅದಕ್ಕೆ ಸಂಬಂಧಿತ ಉದ್ಯಮಗಳೂ ತೊಂದರೆಗಳಿಗೆ ಈಡಾಗುತ್ತವೆ.

ಮೇಲೆ ಪ್ರಸ್ತಾಪಿಸಿರುವಂತಹ ಆಜ್ಞಾಪನೆಗಳನ್ನು ನಿರಂಕುಶ ಪ್ರಭುತ್ವಗಳು ಜಾರಿಮಾಡುತ್ತವೆ. ಒಂದು ಪ್ರಜಾತಾಂತ್ರಿಕ ದೇಶದಲ್ಲಿ ಇವುಗಳನ್ನು ಜಾರಿಮಾಡುವುದು ಸರಿಯಾದ ನಡೆಯಲ್ಲ. ಸಾಧುಗಳು, ಸಂತರು ಅಥವಾ ಅಸಂಖ್ಯ ಭಕ್ತರು ಒತ್ತಾಯಿಸಿದ ಮಾತ್ರಕ್ಕೆ ಒಂದು ಚುನಾಯಿತ ಸರಕಾರ ಈ ಬಗೆಯ ನಿರ್ಧಾರ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಇಂತಹ ಆಲೋಚನೆಗಳ ಹಿಂದಿರುವುದು ಶುದ್ಧ ರಾಜಕೀಯ ಲೆಕ್ಕಾಚಾರಗಳು ಅಷ್ಟೇ.

Writer - ಮ. ಶ್ರೀ. ಮುರಳಿ ಕೃಷ್ಣ

contributor

Editor - ಮ. ಶ್ರೀ. ಮುರಳಿ ಕೃಷ್ಣ

contributor

Similar News