ಗಂಭೀರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುವವರಿಗೆ ಗುಂಡು ಹಾರಿಸಿ: ಡಿಸಿಎಂ ಪರಮೇಶ್ವರ್

Update: 2018-12-15 13:55 GMT

ಬೆಂಗಳೂರು, ಡಿ.15: ಕಾನೂನಿಗೆ ವಿರುದ್ಧವಾಗಿ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಪೊಲೀಸರು ಗುಂಡು ಹಾರಿಸಿ ಕಾಲು ಮುರಿಯುತ್ತಾರೆ ಎಂದು ಉಪಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ.

ದೇವರಜೀವನಹಳ್ಳಿಯ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಗೃಹ ಸಚಿವ ಹಾಗೂ ಉಪಮುಖ್ಯಮಂತ್ರಿ, ಕಾನೂನಿಗೆ ವಿರುದ್ಧವಾಗಿ ಗಂಭೀರ ಪ್ರಕರಣಗಳಲ್ಲಿ ಪಾಲ್ಗೊಳ್ಳುವವರಿಗೆ ಗುಂಡು ಹಾರಿಸಿ ಕಾಲು ಮುರಿಯಿರಿ. ನಾವೇನು ಗುಂಡು ಹಾಕಬೇಡಿ ಎಂದು ಹೇಳುವುದಿಲ್ಲ ಎಂದು ಪೊಲೀಸರಿಗೆ ಸೂಚನೆ ನೀಡಿದರು.

ಗಂಭೀರ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಳ್ಳುವವರು ಬಂಧಿಸಿ ಜೈಲಿಗೆ ಕಳಿಸಲಾಗುತ್ತದೆ. ಅನಂತರ ಅವರು ಬಿಡುಗಡೆಯಾದ ಮೇಲೆ ಅದೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಹೀಗಾಗಿ, ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಮಾಡಲು ಪೊಲೀಸರು ಕಾಲಿಗೆ ಗುಂಡು ಹಾರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ನುಡಿದರು.

ಅಪರಾಧ ಕೃತ್ಯಗಳಲ್ಲಿ ಬಡವರು, ಮಧ್ಯಮ ವರ್ಗದವರೇ ಹೆಚ್ಚಾಗಿ ತೊಡಗಿದ್ದು, ಪೊಲೀಸರ ಪ್ರಕರಣ ಎದುರಿಸಿ ನ್ಯಾಯಾಲಯ, ವಕೀಲರಿಗೆ ತಮ್ಮ ದುಡಿಮೆಯ ಬಹುಪಾಲು ಹಣ ಖರ್ಚಾಗಲಿದೆ. ಅದನ್ನು ಬಿಟ್ಟು ದುಡಿದ ಹಣವನ್ನು ಉತ್ತಮ ಜೀವನ ನಡೆಸಲು ಬಳಸಿಕೊಳ್ಳಿ ಎಂದು ಸಲಹೆ ಮಾಡಿದರು.

ದೇವರಜೀವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರತಿವರ್ಷ 400 ಅಪರಾಧಗಳು ದಾಖಲಾಗುತ್ತವೆ. ಕೇಂದ್ರ ಸರಕಾರದ ಮಾರ್ಗಸೂಚಿಯ ಪ್ರಕಾರ ಪ್ರತಿ ವರ್ಷ 300 ಅಪರಾಧ ಪ್ರಕರಣಗಳು ದಾಖಲಾಗುವ ವ್ಯಾಪ್ತಿಯ ಪ್ರದೇಶಕ್ಕೆ ಪೊಲೀಸ್ ಠಾಣೆಯನ್ನು ನೀಡಬೇಕೆಂಬ ನಿಯಮವಿದೆ. ಯಾರು ಈ ನಿಯಮ ಮಾಡಿದರೋ ಗೊತ್ತಿಲ್ಲ ಎಂದರು.

10 ಸಾವಿರ ಪ್ರಕರಣ: ನಗರದ ಸುಮಾರು 167 ಸಿಗ್ನಲ್‌ಗಳಲ್ಲಿ, ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಕ್ಯಾಮರಾ ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತದೆ. ಪ್ರತಿದಿನ 10 ಸಾವಿರ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗುತ್ತಿವೆ.

ಅಪರಾಧ ಕಡಿಮೆ: ಬೆಂಗಳೂರು ಸೇರಿದಂತೆ ನಗರದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನಷ್ಟು ಕಠಿಣ ಹಾಗೂ ಪ್ರಾಮಾಣಿಕ ಕ್ರಮಗಳ ಮೂಲಕ ಪೊಲೀಸರು ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದಗೌಡ, ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ, ರಮೇಶ್ ಗೌಡ, ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News