ಕೆಂಪೇಗೌಡ ಬಡಾವಣೆ ನಿವೇಶನದಾರರ ಹಣ ಪಾವತಿಗೆ ಅವಧಿ ವಿಸ್ತರಣೆ: ಡಾ.ಜಿ.ಪರಮೇಶ್ವರ್

Update: 2018-12-15 13:56 GMT

ಬೆಂಗಳೂರು, ಡಿ.15: ಇತ್ತೀಚೆಗಷ್ಟೆ ಕೆಂಪೇಗೌಡ ಬಡಾವಣೆ ನಿವೇಶನ ಪಡೆದಿದ್ದ ಫಲಾನುಭವಿಗಳಿಗೆ ಹಣ ಪಾವತಿಸಲು ನೀಡಿದ್ದ ಗಡುವನ್ನು ಒಂದು ತಿಂಗಳ ಕಾಲ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶನಿವಾರ ನಗರದ ಬಿಡಿಎ ಕಚೇರಿಯಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಬೋರ್ಡ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಕಾಲಾವಕಾಶ ನೀಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

ಕೆಂಪೇಗೌಡ ಬಡಾವಣೆಯಲ್ಲಿ ಒಟ್ಟು 4,971 ಮಂದಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಇವರಿಗೆ ಬಡ್ಡಿ ರಹಿತವಾಗಿ ಹಣ ಪಾವತಿಸಲು 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಹಣ ಪಾವತಿಗೆ ಇರುವ ಸಮಯಾವಕಾಶ ಕಡಿಮೆ ಇದ್ದು, ಇನ್ನು ಒಂದು ತಿಂಗಳ ಕಾಲ ಅವಕಾಶ ನೀಡುವಂತೆ ನಿವೇಶನ ಪಡೆದವರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಡ್ಡಿ ರಹಿತವಾಗಿ ಒಂದು ತಿಂಗಳ ಕಾಲ ಅವಕಾಶ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ. ಹೆಚ್ಚುವರಿ ಅವಧಿಯಲ್ಲೂ ಹಣ ಪಾವತಿಯಾಗದಿದ್ದರೆ ಈಗ ನಿಗದಿ ಮಾಡಿರುವಂತೆ ನಿವೇಶನದಾರರು ಬಡ್ಡಿ ಸಹಿತ ಹಣ ಪಾವತಿಸಬೇಕಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು.

ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಸಂಬಂಧ ಜನವರಿ ನಂತರ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ಬಿಡಿಎ ವ್ಯಾಪ್ತಿಯಲ್ಲಿನ ನಿವೇಶನ ಹಾಗೂ ಆಸ್ತಿಗಳ ಬಗ್ಗೆ ಆಡಿಟ್ ನಡೆಸಲು ಟೆಂಡರ್ ಪೂರ್ಣಗೊಳಿಸಿದ್ದು, ಮಾರ್ಚ್ ಅಂತ್ಯದೊಳಗೆ ಟೆಂಡರ್‌ದಾರರು ಆಡಿಟ್ ಕೆಲಸ ಪೂರ್ಣಗೊಳಿಸಲು ಅವಧಿ ನಿಗದಿ ಮಾಡಲಾಗಿದೆ ಎಂದು ಅವರು ಹೇಳಿದರು.

ಬೆಳ್ಳಂದೂರು ಕೆರೆಯ ಸ್ವಚ್ಛತಾ ಕಾರ್ಯದಲ್ಲಿ ಬಿಡಿಎಗೂ ಅರ್ಧಪಾಲು ಇದೆ. ಕೆರೆಗೆ ಕೋಡಿ ನಿರ್ಮಾಣ(ಫ್ಲಶ್ ಗೇಟ್) ಮಾಡುವ ಕಾಮಗಾರಿಯನ್ನು ಮಾರ್ಚ್ ಒಳಗೆ ಮುಗಿಸಲು ನಿರ್ಧರಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ನಗರದಲ್ಲಿ 50 ಚ.ಮೀ. ಅಂತರದಲ್ಲಿ ಕಾರ್ ಪಾರ್ಕಿಂಗ್‌ಗೆ ಅವಕಾಶ ನೀಡುವ ನಿಯಮವಿದೆ. ಇದನ್ನು ಮೆಟ್ರೋ ರೈಲು ಇರುವ ನಗರದಲ್ಲಿ 75 ಚ.ಮೀ.ಗೆ ಹೆಚ್ಚಿಸಲು ತೀರ್ಮಾನಿಸಲಾಯಿತು. ಮೆಟ್ರೋ ಇರುವ ಪ್ರದೇಶದಲ್ಲಿ ಮೆಟ್ರೋ ಬಳಕೆ ಹೆಚ್ಚಿರುವ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News