ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಿಗಿಭದ್ರತೆ: ಎಲ್ಲ ರೀತಿಯ ವಾಹನ ಪ್ರವೇಶ ನಿರ್ಬಂಧ

Update: 2018-12-15 16:14 GMT

ಬೆಂಗಳೂರು, ಡಿ.15: ಕೆಲ ದಿನಗಳ ಹಿಂದೆ ಕೈದಿಗಳ ಅಡುಗೆಗೆ ಮಾಂಸ ಪೂರೈಸುವ ವಾಹನದಲ್ಲಿ ಮೊಬೈಲ್ ಹಾಗೂ ಗಾಂಜಾ ಪತ್ತೆಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜೈಲು ಅಧಿಕಾರಿಗಳು, ಇನ್ನು ಮುಂದೆ ಜೈಲಿನೊಳಗೆ ಆಹಾರ ಸಾಮಗ್ರಿ, ತರಕಾರಿ ಪೂರೈಕೆ ಸೇರಿದಂತೆ ಎಲ್ಲ ರೀತಿಯ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.

ಕೆಲವು ಅಹಿತಕರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದು ಕೊಳ್ಳಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸಾಕಷ್ಟು ಬಿಗಿಭದ್ರತೆ ಒದಗಿಸಿರುವ ನಡುವೆಯೂ ಕೈದಿಗಳಿಗೆ ಮೊಬೈಲ್ ಹಾಗೂ ಗಾಂಜಾ ಪೂರೈಸುವ ಯತ್ನ ನಡೆದಿರುವುದು ಕಾರಾಗೃಹ ಇಲಾಖೆ ಅಧಿಕಾರಿಗಳ ನಿದ್ದೆಗೆಡಿಸಿತ್ತು. ಹೀಗಾಗಿ, ಮುಖ್ಯ ದ್ವಾರದಲ್ಲಿಯೇ ಎಲ್ಲ ವಾಹನಗಳನ್ನು ನಿಲ್ಲಿಸಿ, ಮಾಂಸ, ತರಕಾರಿ ಸೇರಿ ಎಲ್ಲ ಸಾಮಗ್ರಿಗಳನ್ನು ಅಲ್ಲಿಯೇ ಅನ್ಲೋಡ್ ಮಾಡಿಕೊಂಡು. ನಮ್ಮದೇ ವಾಹನದಲ್ಲಿ ಅವುಗಳನ್ನು ಅಡುಗೆ ಮನೆಗೆ ತಲುಪಿಸಲಾಗುತ್ತಿದೆ ಎಂದು ಜೈಲು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮಾಂಸ ಸಾಗಣೆ ವೇಳೆ ಮೊಬೈಲ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆ ಮುಂದುವರಿಸಲಾಗಿದೆ. ಬಂಧಿತರಾಗಿದ್ದ ಮೂವರು ಆರೋಪಿಗಳ ಜತೆ ಜೈಲು ಸಿಬ್ಬಂದಿ ಅಥವಾ ಅಲ್ಲಿ ಕೆಲಸ ಮಾಡುವ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಜತೆಗೆ, ಘಟನೆ ಬಳಿಕ ಜೈಲು ಸಿಬ್ಬಂದಿಯ ಸಭೆಯನ್ನು ನಡೆಸಲಾಗಿದೆ.

ಈ ರೀತಿಯ ಘಟನೆಗಳು ಮರುಕಳಿಸಿದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ಕೂಡ ನೀಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯಾರಿಗೆ ಕೊಡುವ ಉದ್ದೇಶದಿಂದ ಮೊಬೈಲ್ ತರಲಾಗಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News