ಚಿಂದಿ ಆಯುವವರಿಗೆ ಒಣತ್ಯಾಜ್ಯ ವಿಲೇವಾರಿ ಜವಾಬ್ದಾರಿ: ಪಾಲಿಸಿ ತರಲು ಬಿಬಿಎಂಪಿ ಚಿಂತನೆ

Update: 2018-12-15 16:21 GMT

ಬೆಂಗಳೂರು, ಡಿ.15: ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಪಾಲಿಕೆಯು, ಚಿಂದಿ ಆಯುವವರಿಗೆ ಒಣತ್ಯಾಜ್ಯ ವಿಲೇವಾರಿ ಜವಾಬ್ದಾರಿ ವಹಿಸಲು ಮುಂದಾಗಿದ್ದಾರೆ.

ನಗರದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಈಗಾಗಲೇ ಹಲವಾರು ಕ್ರಮಗಳನ್ನು ಬಿಬಿಎಂಪಿಯಿಂದ ರೂಪಿಸಲಾಗಿದೆ. ಅಲ್ಲದೆ, ಹಸಿತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ವಾರ್ಡ್‌ವಾರು ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ. ಇದರಿಂದಾಗಿ ಒಣತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗುವ ಸಾಧ್ಯತೆಯಿರುವುದರಿಂದ ಒಣತ್ಯಾಜ್ಯ ವಿಲೇವಾರಿಗೆ ಚಿಂದಿ ಆಯುವವರನ್ನು ನೇಮಕ ಮಾಡಿಕೊಳ್ಳಲು ಪಾಲಿಕೆ ಮುಂದಾಗಿದೆ.

ನಗರದ ಪ್ರಮುಖ ರಸ್ತೆಗಳು, ಮೈದಾನ, ಖಾಲಿ ನಿವೇಶನ ಹಾಗೂ ತ್ಯಾಜ್ಯರಾಶಿ ಹೀಗೆ ಎಲ್ಲೆಂದರಲ್ಲಿ ಬಾಟಲ್, ಪ್ಲಾಸ್ಟಿಕ್ ವಸ್ತುಗಳ ಸಂಗ್ರಹಣೆಯಲ್ಲಿ ತೊಡಗುವ ಚಿಂದಿ ಆಯುವವರಿಗೆ ಹೊಸದೊಂದು ಕೆಲಸ ಕೊಡಲು ಪಾಲಿಕೆ ಸಜ್ಜಾಗಿದೆ. ಆ ಹಿನ್ನೆಲೆಯಲ್ಲಿ ನಗರದಲ್ಲಿನ 7 ಸಾವಿರ ಅಧಿಕೃತ ಚಿಂದಿ ಆಯುವವರ ಮಾಹಿತಿ ಕಲೆಹಾಕಿದೆ.

ಪಾಲಿಸಿ ತರಲು ಚಿಂತನೆ: ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿಯನ್ನು ಸರಿದಾರಿಗೆ ತರುವ ಉದ್ದೇಶದಿಂದ ಪಾಲಿಕೆಯಲ್ಲಿ ಹೊಸ ಒಣತ್ಯಾಜ್ಯ ಸಂಗ್ರಹ ಕಾಯ್ದೆ ತರಲು ಅಧಿಕಾರಿಗಳು ಮುಂದಾಗಿದ್ದಾರೆ. ಆ ಸಂಬಂಧ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ಮಾಡಿರುವ ಅಧಿಕಾರಿಗಳು ಶೀಘ್ರದಲ್ಲಿಯೇ ಕಾಯ್ದೆಯನ್ನು ಮಂಡಿಸಿ ಅನುಮೋದನೆ ಪಡೆಯುವ ಸಾಧ್ಯತೆ ಇದೆ.

ಒಣತ್ಯಾಜ್ಯ ಸಂಗ್ರಹ ಕೇಂದ್ರಗಳು ಇಲ್ಲದ ಸ್ಥಳಗಳಲ್ಲಿ ಚಿಂದಿ ಆಯುವವರನ್ನು ಬಳಸಿಕೊಳ್ಳಲು ಪಾಲಿಕೆ ನಿರ್ಧರಿಸಿದ್ದು, ಅವರಿಗೆ ಪಾಲಿಕೆಯಿಂದ ಅಗತ್ಯ ವಾಹನ ವ್ಯವಸ್ಥೆ, ಸುರಕ್ಷತಾ ಪರಿಕರಗಳು ಹಾಗೂ ಪ್ರೋತ್ಸಾಹ ಧನವನ್ನೂ ನೀಡಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News