ಕೆಂಪೇಗೌಡ ಪ್ರಶಸ್ತಿಗೆ ಮಾರ್ಗಸೂಚಿ ಮತ್ತು ತಜ್ಞರ ಸಮಿತಿ ರಚನೆ

Update: 2018-12-15 16:50 GMT

ಬೆಂಗಳೂರು, ಡಿ.15: ಬಿಬಿಎಂಪಿಯ ಕೆಂಪೇಗೌಡ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಮಾರ್ಗಸೂಚಿ ಮತ್ತು ತಜ್ಞರ ಸಮಿತಿ ರಚನೆ ಮನವಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಹಮತ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಪ್ರಶಸ್ತಿಗಳ ಸಂಖ್ಯೆಯನ್ನು 100ಕ್ಕೆ ಸೀಮಿತಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ಬರೋಬ್ಬರಿ 550ಕ್ಕೂ ಹೆಚ್ಚು ಸಾಧಕರಿಗೆ ಪ್ರದಾನ ಮಾಡಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದ ಬಿಬಿಎಂಪಿ, ಕೊನೆಗೂ ಕೆಂಪೇಗೌಡರ ಹೆಸರಿನ ಪ್ರಶಸ್ತಿಯ ಮೌಲ್ಯ ಹೆಚ್ಚಿಸಲು ಮುಂದಾಗಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಸಾಲಿನಿಂದ ಪ್ರಶಸ್ತಿಗೆ ಕೆಲ ಮಾನದಂಡಗಳನ್ನು ನಿಗದಿಪಡಿಸಲು ಪಾಲಿಕೆ ನಿರ್ಧರಿಸಿದೆ. ಪ್ರಸಕ್ತ ಸಾಲಿನಲ್ಲಿ ಯಾವುದೇ ಮಾನದಂಡಗಳ ಅನುಸರಿಸದೆ 550ಕ್ಕೂ ಹೆಚ್ಚು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪರಿಣಾಮ ಪ್ರಶಸ್ತಿ ಪ್ರದಾನ ಸಮಾರಂಭ ಅವ್ಯವಸ್ಥೆಯ ಗೂಡಾಗಿ ಪರಿಣಮಿಸಿತ್ತು. ಜತೆಗೆ ನೂರಾರು ಪುರಸ್ಕೃತರಿಗೆ ಪ್ರಶಸ್ತಿ ಫಲಕ ಹಾಗೂ ಸ್ಮಾರಕಗಳು ದೊರೆಯದೆ ಮುಜುಗರ ಅನುಭವಿಸುವಂತಾಗಿತ್ತು. ಜತೆಗೆ ಕಾರ್ಯಕ್ರಮ ನೋಡಲು ಬಂದವರು ಪ್ರಶಸ್ತಿ ಪಡೆಯುವ ಮೂಲಕ ಪಾಲಿಕೆಯ ಆಡಳಿತ ವೈಖರಿಯನ್ನು ಬಯಲು ಮಾಡಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ಅವ್ಯವಸ್ಥೆಯ ಗೂಡಾಗಿ ಪರಿಣಮಿಸಿದ್ದು ಹಾಗೂ 550ಕ್ಕೂ ಹೆಚ್ಚಿನ ಜನರಿಗೆ ಪ್ರಶಸ್ತಿ ನೀಡಿದ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜತೆಗೆ ಬಿಬಿಎಂಪಿ ಕೆಂಪೇಗೌಡ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯ ಮೌಲ್ಯವನ್ನು ಹಾಳು ಮಾಡುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದಿಂದ ನೀಡಲಾಗುವ ಪ್ರಶಸ್ತಿಗಳಿಗೆ ಇರುವ ಮಾನದಂಡಗಳನ್ನು ಕೆಂಪೇಗೌಡ ಪ್ರಶಸ್ತಿಗೂ ಅಳವಡಿಸಿಕೊಳ್ಳಲು ಮುಂದಾಗಿದ್ದು, ಮಾನದಂಡಗಳನ್ನು ಸಿದ್ಧಪಡಿಸಿ ಸರಕಾರದಿಂದ ಆದೇಶ ಹೊರಡಿಸಲು ಚಿಂತನೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News