ನಿರ್ಭಯಾ ಯೋಜನೆ ಅಡಿ ಸೌಲಭ್ಯ: ಮಹಿಳೆಯರಿಗಾಗಿ ಬಸ್, ಲಘು ಮೋಟಾರು ವಾಹನಗಳ ಉಚಿತ ತರಬೇತಿ

Update: 2018-12-15 16:52 GMT

ಬೆಂಗಳೂರು, ಡಿ.15: ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಚಾಲಕರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಇದೆ. ಆದರೆ, ಮಹಿಳಾ ಚಾಲಕರಿಲ್ಲದ ಕಾರಣ, ಉದ್ದೇಶಿತ ಯೋಜನೆಗೆ ಚಾಲನೆಯೇ ಸಿಕ್ಕಿಲ್ಲ. ಈಗ ಇದಕ್ಕೆ ಕಾಲ ಸನ್ನಿಹಿತವಾಗಿದ್ದು, ಮಹಿಳಾಮಣಿಗಳು ಭಾರಿ ಮತ್ತು ಲಘು ವಾಹನಗಳ ಚಾಲನೆಯತ್ತ ಮುಖ ಮಾಡುತ್ತಿದ್ದಾರೆ.

ಬಿಎಂಟಿಸಿಯು ನಿರ್ಭಯಾ ಯೋಜನೆ ಅಡಿ ನೀಡುತ್ತಿರುವ ಬಸ್ ಮತ್ತು ಲಘು ಮೋಟಾರು ವಾಹನಗಳ ಉಚಿತ ತರಬೇತಿಗೆ 115 ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 12 ಜನ ಭಾರಿ ವಾಹನಗಳ ಚಾಲನಾ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಪಡೆಯುತ್ತಿರುವ ಬಹುತೇಕ ಮಹಿಳೆಯರು ಬಿಎಂಟಿಸಿಗೆ ಸೇರ್ಪಡೆಗೊಳ್ಳಲು ಆಸಕ್ತಿ ಹೊಂದಿದ್ದಾರೆ.

ಉದ್ದೇಶಿತ ಯೋಜನೆ ಅಡಿ ನಿಗಮವು ಏಳೂವರೆ ಕೋಟಿ ರೂ. ವೆಚ್ಚದಲ್ಲಿ ಸಾವಿರ ಮಹಿಳೆಯರಿಗೆ ಚಾಲನಾ ತರಬೇತಿ ನೀಡುವ ಗುರಿ ಹೊಂದಿದೆ. ಯೋಜನೆಗೆ ಆರಂಭದಿಂದಲೂ ಉತ್ತಮ ಸ್ಪಂದನೆ ದೊರೆತಿರಲಿಲ್ಲ. ಆದರೆ, ಇತ್ತೀಚೆಗೆ ಬೇಡಿಕೆ ಹೆಚ್ಚಿದೆ. ಈವರೆಗೆ 115 ಮಹಿಳೆಯರು ಹೆಸರು ನೋಂದಾಯಿಸಿದ್ದು, 103 ಮಹಿಳೆಯರು ಲಘು ಮತ್ತು 12 ಅಭ್ಯರ್ಥಿಗಳು ಭಾರೀ ವಾಹನಗಳ ಚಾಲನಾ ತರಬೇತಿ ಪಡೆಯಲು ಮುಂದೆ ಬಂದಿದ್ದಾರೆ ಎಂದರು.

ಲಘು ವಾಹನ ಚಾಲನೆ ತರಬೇತಿ ಪಡೆದವರು, ವರ್ಷದ ನಂತರ ಭಾರಿ ವಾಹನ ಚಾಲನಾ ತರಬೇತಿಗೆ ಹೆಸರು ನೋಂದಾಯಿಸಬಹುದು. ಅವರಿಗೆ ಸೂಕ್ತ ತರಬೇತಿ ನೀಡಿ, ಪರವಾನಗಿಯನ್ನೂ ನೀಡಲಾಗುವುದು ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು. ರಾಜ್ಯದಲ್ಲಿ ಚಾಲನಾ ಪರವಾನಿಗೆ ಹೊಂದಿದವರಲ್ಲಿ ಮಹಿಳೆಯರು ಕೇವಲ ಶೇ.15ರಷ್ಟು ಇದ್ದಾರೆ. ಹಾಗಾಗಿ, ಕೆಎಸ್‌ಆರ್‌ಟಿಸಿ ಕೂಡ ಇದೇ ಮಾದರಿಯಲ್ಲಿ ಉಚಿತ ತರಬೇತಿ ನೀಡಲು ಉದ್ದೇಶಿಸಿದೆ. ಅಂದಹಾಗೆ ಬಿಎಂಟಿಸಿ ವ್ಯಾಪ್ತಿಯಲ್ಲಿ 6,677 ಬಸ್‌ಗಳಿದ್ದು, ಚಾಲಕಿಯರು ಇರುವುದು ಹೇರಳವಾಗಿದ್ದು, ಇದರಿಂದಾಗಿ ತರಬೇತಿಯನ್ನು ನೀಡಲಾಗುತ್ತಿದೆ.

ನಗರದ ರಸ್ತೆಗಳಲ್ಲೇ ಟ್ರೈನಿಂಗ್: ಎರಡು ಪಾಳಿಗಳಲ್ಲಿ ಚಾಲನಾ ತರಬೇತಿ ನಡೆಯಲಿದ್ದು, ಬೆಳಗ್ಗೆ 6ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 1ರಿಂದ ಸಂಜೆ 6ರವರೆಗೆ. ಲಘು ವಾಹನಗಳ ಚಾಲನಾ ತರಬೇತಿ ನಗರದ ರಸ್ತೆಗಳಲ್ಲಿ ಹಾಗೂ ಭಾರಿ ವಾಹನಗಳ ಚಾಲನಾ ತರಬೇತಿ ಮಾಗಡಿ ರಸ್ತೆಯ ವಡ್ಡರಹಳ್ಳಿಯಲ್ಲಿ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 77609 91348 ಅನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News