ಏಕತೆ ಪ್ರತಿಮೆಗಳಲ್ಲಿ ಇಲ್ಲ, ಸಂವಿಧಾನದ ಆಶಯಗಳಲ್ಲಿದೆ: ಜ್ಞಾನಪ್ರಕಾಶನಂದ ಸ್ವಾಮೀಜಿ

Update: 2018-12-15 17:03 GMT

ಬೆಂಗಳೂರು, ಡಿ.15: ರಾಷ್ಟ್ರದ ಏಕತೆ ಎಂಬುದು ಪ್ರತಿಮೆಗಳಲ್ಲಿ ಇಲ್ಲ. ರಾಷ್ಟ್ರ ಏಕತೆ ಅಂಬೇಡ್ಕರ್ ನೀಡಿರುವ ಸಂವಿಧಾನದ ಆಶಯಗಳಲ್ಲಿದೆ ಎಂದು ಪ್ರಗತಿಪರ ಸ್ವಾಮಿ ಜ್ಞಾನಪ್ರಕಾಶನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಸಂಸ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಹರೀಶ್ ಕುಮಾರ್ ಸಂಪಾದಕತ್ವದ ಡಾ.ಸಿ.ಎಸ್.ದ್ವಾರಕಾನಾಥ್ ಅವರ ಲೇಖನಗಳ ಸಂಗ್ರಹ ‘ಮೂಖನಾಯಕ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂಬೇಡ್ಕರ್ ಎಲ್ಲರೂ ಸಮಾನವಾಗಿ ಬದುಕುವ ರೀತಿಯಲ್ಲಿ ಸಂವಿಧಾನದಲ್ಲಿ ಹಕ್ಕುಗಳನ್ನು ನೀಡಿದ್ದಾರೆ. ಅದನ್ನು ಜಾರಿ ಮಾಡುವುದರಿಂದ ಏಕತೆ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದರು.

ಭಾರತದಲ್ಲಿ ಅಂಬೇಡ್ಕರ್‌ರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಅಂಬೇಡ್ಕರ್ ನಿಂತ ನೀರಲ್ಲ, ನಿರಂತರವಾಗಿ ಹರಿಯುವ ಜ್ಞಾನದ ಅರಿವು. ಆದರೆ, ಇಂದಿನ ದಿನಗಳಲ್ಲಿ ಅವರನ್ನು ಒಂದು ಪ್ರತಿಮೆ, ಫೋಟೋಗಳಿಗೆ ಸೀಮಿತ ಮಾಡಲಾಗುತ್ತಿದೆ. ಅಲ್ಲದೆ, ಅವರನ್ನು ಒಂದು ಜಾತಿ, ಸಮುದಾಯಕ್ಕೆ ಮೀಸಲಿಡಲು ಪಟ್ಟಭದ್ರ ಹಿತಾಸಕ್ತಿಗಳು ಮುಂದಾಗಿದ್ದಾರೆ ಎಂದು ದೂರಿದರು.

ಲೇಖಕಿ ಪಲ್ಲವಿ ಇಡೂರ್ ಮಾತನಾಡಿ, ಕೃತಿಯು ಸಮಾಜದಲ್ಲಿನ ಆಧುನಿಕ ಅಸ್ಮಶ್ಯತೆಯ ಮುಖಗಳನ್ನು ಅನಾವರಣಗೊಳಿಸುತ್ತದೆ. ದೇಶದ ಸಾಮಾಜಿಕ ವ್ಯವಸ್ಥೆ, ಭೇದ-ಭಾವ ಕುರಿತ ಲೇಖನಗಳಿವೆ. ಅಲ್ಲದೆ, ನಮ್ಮಲ್ಲಿರುವ ಗುಲಾಮಗಿರಿ ಪದ್ಧತಿಯನ್ನು ದ್ವಾರಕಾನಾಥ್ ಅವರು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ನಾವು ನಮ್ಮನ್ನು ಪ್ರಶ್ನಿಸಿಕೊಳ್ಳದೇ ಮೂಕವಾಗಿ ಎಲ್ಲವನ್ನೂ ಒಪ್ಪಿಕೊಂಡು ಇದೇ ಸತ್ಯ ಎಂದು ನಡೆಯುತ್ತಿದ್ದೇವೆ. ಆದರೆ, ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲವರು ಅಟ್ಟಹಾಸ ಮೆರೆಯುತ್ತಿರುವುದು ದುರದೃಷ್ಟಕರ ಎಂದರು. ಕಾರ್ಯಕ್ರಮದಲ್ಲಿ ವಕೀಲ ಸಿ.ಎಸ್.ದ್ವಾರಕಾನಾಥ್, ನಟ ಚೇತನ್ ಅಹಿಂಸಾ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News