ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

Update: 2018-12-16 05:51 GMT

ಪರ್ತ್, ಡಿ.16: ಮಾಸ್ಟರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ರವಿವಾರ ಆಸ್ಟ್ರೇಲಿಯ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ 25ನೇ ಶತಕ ಸಿಡಿಸಿದರು. ಕಾಂಗರೂ ನಾಡಿನಲ್ಲಿ ಆರನೇ ಶತಕವನ್ನು ಸಿಡಿಸಿದ ಕೊಹ್ಲಿ ತನ್ನ ಬಾಲ್ಯದ ಹೀರೋ ಸಚಿನ್ ತೆಂಡುಲ್ಕರ್‌ರ ದಾಖಲೆಯನ್ನು ಸರಿಗಟ್ಟಿದರು.

 75ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ, ‘ರನ್ ಮೆಶಿನ್’ ಖ್ಯಾತಿಯ ಕೊಹ್ಲಿ ಆಸೀಸ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಎಸೆತವನ್ನು ಬೌಂಡರಿ ಗೆರೆ ದಾಟಿಸುವ ಮೂಲಕ 214 ಎಸೆತಗಳಲ್ಲಿ ಶತಕ ಪೂರೈಸಿದರು.

ಕೊಹ್ಲಿ 257 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್‌ಗಳ ಸಹಿತ 123 ರನ್ ಗಳಿಸಿ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಕೊಹ್ಲಿ ಆಸ್ಟ್ರೇಲಿಯದಲ್ಲಿ ನೆಲದಲ್ಲಿ 6ನೇ ಶತಕವನ್ನು ಪೂರೈಸುವುದರೊಂದಿಗೆ ಸಚಿನ್ ದಾಖಲೆಯನ್ನು ಸರಿದೂಗಿಸಿದರು. ಅಲಿಸ್ಟೈರ್ ಕುಕ್, ಡೇವಿಡ್ ಗೊವರ್ ಹಾಗೂ ಕ್ಲೈವ್ ಲಾಯ್ಡಿ ದಾಖಲೆಯನ್ನು ಹಿಂದಿಕ್ಕಿದರು.

 ತೆಂಡುಲ್ಕರ್ ಆಸೀಸ್ ವಿರುದ್ಧ ಆರು ಶತಕ ಗಳಿಸಲು 20 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಕೊಹ್ಲಿ ಕೇವಲ 10 ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್‌ನ ಜಾಕ್ ಹಾಬ್ಸ್(9) ಹಾಗೂ ವ್ಯಾಲಿ ಹ್ಯಾಮ್ಮಂಡ್(7)ಮಾತ್ರ ಆಸೀಸ್ ವಿರುದ್ಧ ಗರಿಷ್ಠ ಶತಕ ಸಿಡಿಸಿದ್ದಾರೆ.

ಕೊಹ್ಲಿ ಎರಡನೇ ಅತ್ಯಂತ ವೇಗದಲ್ಲಿ(127 ಇನಿಂಗ್ಸ್)25 ಟೆಸ್ಟ್ ಶತಕಗಳನ್ನು ಪೂರೈಸಿದ ಸಾಧನೆ ಮಾಡಿದ್ದಾರೆ. ಅತ್ಯಂತ ವೇಗವಾಗಿ 25 ಶತಕ ಪೂರೈಸಿದ ದಾಖಲೆ ಆಸೀಸ್‌ನ ಬ್ಯಾಟಿಂಗ್ ದಂತಕತೆ ಡಾನ್ ಬ್ರಾಡ್ಮನ್(68 ಇನಿಂಗ್ಸ್)ಹೆಸರಲ್ಲಿದೆ. ತೆಂಡುಲ್ಕರ್(130 ಇನಿಂಗ್ಸ್) ವೇಗವಾಗಿ 25 ಶತಕ ಪೂರೈಸಿರುವ ವಿಶ್ವದ 3ನೇ ದಾಂಡಿಗ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News