×
Ad

ಇಂಗ್ಲಿಷ್‌ನಲ್ಲಿ ಆಹ್ವಾನ ಕೊಟ್ಟು ಕರೆಯುವಷ್ಟು ಅವಮಾನ ಬೇರೊಂದಿಲ್ಲ: ನಾಡೋಜ ಕೆ.ಎಸ್.ನಿಸಾರ್ ಅಹ್ಮದ್

Update: 2018-12-16 19:42 IST

ಬೆಂಗಳೂರು, ಡಿ.16: ಇತ್ತೀಚೆಗೆ ಆಹ್ವಾನ ಪತ್ರಿಕೆಗಳೆಲ್ಲ ಇಂಗ್ಲಿಷ್‌ಮಯವಾಗಿದ್ದು, ಕನ್ನಡಿಗರಿಗೆ ಇಂಗ್ಲಿಷ್‌ನಲ್ಲಿ ಆಹ್ವಾನ ಕೊಟ್ಟು ಕರೆಯುವಷ್ಟು ಅವಮಾನ ಬೇರೊಂದಿಲ್ಲ ಎಂದು ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಬೇಸರ ವ್ಯಕ್ತಪಡಿಸಿದರು.

ರವಿವಾರ ನಗರದ ನಯನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ, ಕನ್ನಡ ನುಡಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲೆಲ್ಲೂ ಇಂಗ್ಲಿಷ್ ಬಳಕೆ ಎದ್ದು ಕಾಣುತ್ತಿದೆ. ಕನ್ನಡ ಭಾಷೆಯ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು. ಅದನ್ನು ಬಿಟ್ಟು ಕನ್ನಡಿಗರೇ ಆಹ್ವಾನ ಪತ್ರಿಕೆಯಲ್ಲಿ ಇಂಗ್ಲಿಷ್‌ಗೆ ಅವಕಾಶ ಕಲ್ಪಿಸಿಕೊಟ್ಟರೆ ಹೇಗೆ ಎಂದು ಪ್ರಶ್ನಿಸಿದರು.

ಮೊದಲು ಇಂಗ್ಲಿಷ್ ವ್ಯಾಮೋಹ ಬಿಡಿ, ಕನ್ನಡ ಭಾಷೆ ಬಳಕೆ ಮಾಡಿ. ಕನ್ನಡ ಪರ ಕೆಲಸ ಮಾಡಲು ಬಂದವರಿಗೆ ತಡೆಗಳೇ ಹೆಚ್ಚು ಮೊದಲು ಅವರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಚಳುವಳಿಗಾರರನ್ನು ಕಂಡರೆ ಮೂಗು ಮುರಿಯುತ್ತಿದ್ದಾರೆ. ಅವರನ್ನು ಟೀಕಿಸುವ ಬದಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಹಣ ಪಡೆದು ಚಳುವಳಿ ಮಾಡುತ್ತಾರೆ ಎಂದು ಮಾತನಾಡುತ್ತಾರೆ. ಇದು ತಪ್ಪು. ಕನ್ನಡದ ನೆಲ-ಜಲ, ಸಾಹಿತ್ಯದ ವಿಚಾರವಾಗಿ ನೆತ್ತರು ಕೊಟ್ಟು ಜೈಲಿಗೆ ಹೋಗಿ ಬಂದಿರುವ ಹೋರಾಟಗಾರರು ನಮ್ಮೊಂದಿಗೆ ಇದ್ದಾರೆ ಎಂಬುವುದನ್ನು ಮರೆಯಬಾರದು ಎಂದು ಸ್ಮರಿಸಿದರು.

ರಾಜಧಾನಿ ಸೇರಿದಂತೆ ರಾಜ್ಯದಲ್ಲಿ ಇಂಗ್ಲಿಷ್ ಜಾಹೀರಾತುಗಳು ಹೆಚ್ಚು ಕಾಣುತ್ತಿವೆ. ಇದನ್ನು ನೋಡಿದರೆ ನಾವು ನಮ್ಮ ರಾಜ್ಯದಲ್ಲಿದ್ದೇವೋ ಅಥವಾ ಬೇರೆ ದೇಶದಲ್ಲಿದ್ದೇವೋ ಎಂದು ಎನಿಸುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕನ್ನಡ ಭಾಷೆಗೆ ಅತ್ಯಂತ ಗೌರವವಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದೇ ಸಾಕ್ಷಿ ಎಂದು ನುಡಿದರು.

ಕುವೆಂಪು, ಮಾಸ್ತಿ ಸೇರಿದಂತೆ ಇತರ ಕವಿಗಳು ನಮ್ಮ ನುಡಿಯನ್ನು ವಿಶ್ವಮಟ್ಟದಲ್ಲಿ ಸಾರಿದ್ದಾರೆ. ಆದುದರಿಂದ ನಾವೂ ಸಹ ಜನಸಾಮಾನ್ಯರಲ್ಲಿ ಕನ್ನಡ ಭಾಷೆ ಬಗ್ಗೆ ಅರಿವು ಮೂಡಿಸಬೇಕು. ಇಂಗ್ಲಿಷ್ ಎಷ್ಟು ಮುಖ್ಯವೋ ಅಷ್ಟೇ ಕನ್ನಡ ಭಾಷೆಯೂ ಮುಖ್ಯವಾಗಿದೆ. ಇಂಗ್ಲಿಷ್ ಭಾಷೆ ವ್ಯವಹಾರಕ್ಕೆ ಮಾತ್ರ ಬಳಸಿ, ಇನ್ನಿತರೆ ಕಡೆ ಕನ್ನಡ ಭಾಷೆಯನ್ನು ಬಳಸಬೇಕು ಎಂದರು.

ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪಾಠ ಮಾಡಿ ಸಾಹಿತ್ಯ ರಚಿಸಿದರೆ ಸಾಹಿತ್ಯ ಬೆಳವಣಿಗೆ ಅಸಾಧ್ಯ. ಗೋಕಾಕ್ ಚಳವಳಿಯಲ್ಲಿ ಕನ್ನಡ ಸಂಘಟಕರನ್ನು, ಹೋರಾಟಗಾರರ ಸಾಧನೆಯನ್ನು ಮರೆಯುವಂತಿಲ್ಲ. ಕನ್ನಡದ ವಿಚಾರದಲ್ಲಿ ಬೆಂಗಳೂರು ಕಲಬೆರಕೆಯಾಗುತ್ತಿದ್ದು, ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಕಾಲ ಬಹುದೂರವಿಲ್ಲ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕನ್ನಡ ಶಾಲೆಯಲ್ಲಿ ಇಂಗ್ಲಿಷ್ ಕಲಿಕೆಯ ಬಗ್ಗೆ ಮಾತನಾಡುತ್ತಿದ್ದಾರೆ. ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವ ಸರಕಾರದ ನಿರ್ಧಾರ ಕನ್ನಡ ಭಾಷೆಯನ್ನು ಮುಗಿಸಲು ಹೊರಟಿದಂತಿದೆ. ಕನ್ನಡ ಶಾಲೆಗಳ ಏಳ್ಗೆಗೆ ಶ್ರಮಿಸಬೇಕಾಗಿದ್ದ ಸರಕಾರ ಕನ್ನಡ ಮಕ್ಕಳ ಮೇಲೆ ಇಂಗ್ಲಿಷ್ ಕಲಿಕೆ ಹೇರುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಓದಿಸಿದರೆ ಅವರು ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಮನೋಭಾವ ಪೋಷಕರಲ್ಲಿ ಮೂಡಿದೆ. ಆದರೆ, ನಮ್ಮ ಕನ್ನಡ ಭಾಷೆಯಿಂದ ಉತ್ತಮ ಸಾಧನೆ ಮಾಡಬಹುದು ಎಂಬುದರ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಕನ್ನಡ ಶಾಲೆಗಳಲ್ಲಿ ಕಲಿತ ಸಿ.ಎನ್.ಆರ್.ರಾವ್ ಅವರು ವಿಜ್ಞಾನ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದರು ಎಂಬುವುದನ್ನು ಮರೆಯಬಾರದು ಎಂದರು.

ಸಮ್ಮೇಳನಾಧ್ಯಕ್ಷ ಡಾ.ಬಿ.ಎಚ್.ಸತೀಶ್ ಗೌಡ ಮಾತನಾಡಿ, ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುವುದರ ಮೂಲಕ ಭಾಷೆಯನ್ನು ಅಭಿವೃದ್ಧಿಪಡಿಸಬೇಕು. ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ, ಕನ್ನಡ ಪರ ಹೋರಾಟಗಾರ ಡಾ.ಟಿ.ಎಚ್.ಸತೀಶ್‌ ಗೌಡ, ಕಸಾಪದ ಮಾಜಿ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News