ಮೀನು ಖರೀದಿಗೆ ಗೋವಾ ಸರಕಾರ ನಿಷೇಧ: ಪ್ರಧಾನಿ ಮೋದಿ ಮಧ್ಯಸ್ಥಿಕೆ ಅಗತ್ಯ; ದಿನೇಶ್ ಗುಂಡೂರಾವ್

Update: 2018-12-16 16:12 GMT

ಬೆಂಗಳೂರು, ಡಿ. 16: ರಾಜ್ಯದ ಮೀನು ಖರೀದಿ ನಿಷೇಧಿಸಿರುವ ಗೋವಾ ಸರಕಾರದ ಕ್ರಮ ಖಂಡನೀಯವಾಗಿದ್ದು, ಈ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯೆ ಪ್ರವೇಶಿಸಿ ಪರಿಹಾರ ಒದಗಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದರು.

ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಿಂಗರಾಜು ಅವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕರ್ನಾಟಕದ ಮೀನು ಖರೀದಿ ನಿಷೇಧಿಸಿರುವ ಗೋವಾ ಸರಕಾರದ ಕ್ರಮದಿಂದಾಗಿ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಬಂದಿದ್ದು, ಈ ಸಂಬಂಧ ಈಗಾಗಲೇ ಗೋವಾ ಸರಕಾರ ಮತ್ತು ಗೋವಾದಲ್ಲಿನ ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚಿಸಲಾಗಿದೆ ಎಂದರು.

ಎರಡು ರಾಜ್ಯಗಳು ಸಹ ಉತ್ತಮ ಸ್ನೇಹ ಸಂಪರ್ಕದಲ್ಲಿರಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ಈ ಸಮಸ್ಯೆ ಇತ್ಯರ್ಥಗೊಳಿಸಬೇಕೆಂದ ಅವರು, ಯಾವುದೇ ಸರಕಾರ ಅಂತರ್ ರಾಜ್ಯ ವ್ಯಾಪಾರದ ಮೇಲೆ ನಿಷೇಧ ಹೇರುವುದು ಸರಿಯಲ್ಲ ಎಂದು ತಿಳಿಸಿದರು.

ಮೀನುಗಾರರಿಗೆ ರಾಜಕೀಯ ಪ್ರಾತಿನಿದ್ಯ ನೀಡುವುದರೊಂದಿಗೆ ಅವರ ಜೀವನ ಸುಧಾರಣೆಗಾಗಿ ನೂತನ ಕಾಂಗ್ರೆಸ್ ಮೀನುಗಾರ ವಿಭಾಗ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ನೂತನ ಅಧ್ಯಕ್ಷ ಲಿಂಗರಾಜು ಅವರು ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಮೀನುಗಾರ ವಿಭಾಗದ ಜಿಲ್ಲಾ ಸಮಿತಿ ರಚಿಸುವ ಮೂಲಕ ಸಮುದಾಯಕ್ಕೆ ಕಾಂಗ್ರೆಸ್ ಸಿದ್ಧಾಂತ ಕುರಿತಂತೆ ಮಾಹಿತಿ ನೀಡಲಿದ್ದಾರೆ ಎಂದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಉದ್ದೇಶ ಹೊಂದಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಈ ಹಿಂದೆ ಮೋದಿ ಅವರು ಘೋಷಿಸುತ್ತಿದ್ದ ಯೋಜನೆಗಳನ್ನು ಬಿಟ್ಟು ಗೆಲುವಿಗಾಗಿ ಮಂದಿರ, ಪ್ರತಿಮೆ ವಿಚಾರಗಳಂತಹ ಮಂತ್ರ ಆರಂಭಿಸಿದ್ದಾರೆ. ಕಳೆದ 4 ವರ್ಷಗಳಿಂದಲೂ ಮೋದಿ ಅವರ ಸಾಧನೆ ಶೂನ್ಯ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕೆಪಿಸಿಸಿ ಮೀನುಗಾರರ ವಿಭಾಗದ ಅಧ್ಯಕ್ಷ ಲಿಂಗರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News