ಯುವ ಜನತೆಯಲ್ಲಿ ಬರವಣಿಗೆಯ ಆಸಕ್ತಿ ಕಡಿಮೆಯಾಗಿದೆ: ಡಾ.ದೊಡ್ಡರಂಗೇಗೌಡ

Update: 2018-12-16 16:24 GMT

ಬೆಂಗಳೂರು, ಡಿ.16: ಯುವ ಜನತೆಯಲ್ಲಿ ಬರವಣಿಗೆಯ ಕುರಿತು ಆಸಕ್ತಿ ಕಡಿಮೆಯಾಗಿದ್ದು, ಕಾವ್ಯ ರಚನೆ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಸಾಹಿತಿ ಡಾ.ದೊಡ್ಡರಂಗೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ರವಿವಾರ ಜಯನಗರದಲ್ಲಿ ಜಯರಾಮ ಸೇವಾ ಮಂಡಳಿ ಆಯೋಜಿಸಿದ್ದ, ಪಿ.ಎಸ್.ರಮೇಶ್‌ರವರ ಸವೆದ ದಾರಿಯ ಸವಿ ಎಂಬ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಕವನ ಸಾಹಿತ್ಯ ಎಂಬುದು ಅಳಿವಿನ ಅಂಚಿನತ್ತ ಸಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಕೇವಲ ಪ್ರೀತಿ ಪ್ರೇಮದ ಕುರಿತು ಬರೆಯುವ ಬದಲು ಸಮಾಜಮುಖಿ ವಿಚಾರಗಳ ಕುರಿತು ಬರೆಯುವ ಹವ್ಯಾಸ ಹೆಚ್ಚಾಗಬೇಕು. ಮಕ್ಕಳಿಗೆ ಪಠ್ಯದ ಜತೆಗೆ ಪುಸ್ತಕ ಓದುವ ಆಭ್ಯಾಸವನ್ನು ಪೋಷಕರು ಮಾಡಬೇಕು, ಇದರಿಂದ ಮಕ್ಕಳಲ್ಲಿ ಜ್ಞಾನದ ಜತೆಗೆ ಭಾಷೆಯ ಅರಿವು ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಮಕ್ಕಳಲ್ಲಿ ಬರವಣಿಗೆಯ ಹವ್ಯಾಸವನ್ನು ಹುಟ್ಟಿಸಲು ಓದು ಪ್ರೇರೇಪಿಸುತ್ತದೆ. ಒಬ್ಬ ಬರಹಗಾರನಿಗೆ ಭಾಷೆಯ ಜ್ಞಾನ ಅತೀ ಮುಖ್ಯವಾಗಿದ್ದು ಆ ಜ್ಞಾನ ಪುಸ್ತಕ ಓದುವುದರಿಂದ ಬರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಯಾವುದೇ ವಿಚಾರದ ಕುರಿತು ಬರೆಯುವ ಮುನ್ನ ಆ ವಿಚಾರದ ಸಾಧಕ ಬಾಧಕಗಳ ಕುರಿತು ಬರಹಗಾರ ಅರಿತುಕೊಳ್ಳುವುದು ಮುಖ್ಯವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲೇಖಕಿ ಡಾ.ಪದ್ಮಿನಿ ನಾಗರಾಜು, ಸಾಹಿತಿ ಡಾ.ಎಚ್.ಎಸ್.ಎಂ.ಪ್ರಕಾಶ್, ರಂಗಭೂಮಿ ಕಲಾವಿದ ಎಚ್.ಜಿ. ದತ್ತಾತ್ರೇಯ, ಸಾಹಿತಿ ಪಿ.ಎಸ್.ರಮೇಶ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News