ರಾಜಧಾನಿ ರಸ್ತೆಗೆ ಹುತಾತ್ಮ ಯೋಧನ ಹೆಸರು: ಡಾ.ಜಿ.ಪರಮೇಶ್ವರ್

Update: 2018-12-16 16:30 GMT

ಬೆಂಗಳೂರು, ಡಿ.16: ರಾಜಧಾನಿ ಬೆಂಗಳೂರಿನ ಪಶ್ಚಿಮ ವಿಭಾಗದ ರಸ್ತೆಯೊಂದಕ್ಕೆ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್‌ ಕುಮಾರ್ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ರವಿವಾರ ತಮ್ಮ ಟ್ವೀಟ್ ಖಾತೆಯಲ್ಲಿ ಈ ಬಗ್ಗೆ ತಿಳಿಸಿದ್ದು, ಕಾರ್ಗಿಲ್ ದಿವಸ್ ಪ್ರಯುಕ್ತ ಕರ್ನಾಟಕ ಹಾಗೂ ಹೆಮ್ಮೆಯ ಸೈನಿಕ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರನ್ನು ನಗರದ ಪಶ್ಚಿಮ ಭಾಗದ ರಸ್ತೆಯೊಂದಕ್ಕೆ ನಾಮಕರಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಯಾವುದು ರಸ್ತೆ?: ಯಲಹಂಕ ಉಪನಗರದ ಎ ಸೆಕ್ಟರ್ 13ನೆ ಎ ಮುಖ್ಯರಸ್ತೆ, 3ನೆ ಎ ಅಡ್ಡರಸ್ತೆಗೆ ಮೇಜರ್ ಅಕ್ಷಯ್ ಗಿರೀಶ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.

ಯಾರು ಯೋಧ?: ಮೂಲತಃ ಬೆಂಗಳೂರಿನ ಯಲಹಂಕದವರಾಗಿದ್ದ ಮೇಜರ್ ಅಕ್ಷಯ್ ಗಿರೀಶ್‌ ಕುಮಾರ್ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಕಾದಾಟದಲ್ಲಿ 2016ರ ನವೆಂಬರ್‌ನಲ್ಲಿ ಹುತಾತ್ಮರಾಗಿದ್ದರು.

ಮೇಜರ್ ಉನ್ನಿಕೃಷ್ಣನ್ ಅವರಿಗೆ ಸಂದ ಗೌರವವನ್ನು ಅಕ್ಷಯ್ ಗಿರೀಶ್ ಅವರಿಗೂ ನೀಡುವ ಉದ್ದೇಶದಿಂದ ಬಿಬಿಎಂಪಿ ಈ ನಿರ್ಧಾರ ಕೈಗೊಂಡಿತ್ತು. ಆದರೆ ರಸ್ತೆ ಆಯ್ಕೆ ವಿಚಾರದಲ್ಲಿ ಇದ್ದ ಗೊಂದಲದಿಂದಾಗಿ ಕಳೆದ ಎರಡು ವರ್ಷಗಳಿಂದ ನಾಮಕರಣ ವಿಳಂಬವಾಗಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News