ಸಮಾಜದ ಪ್ರತಿಬಿಂಬವೇ ಸಾಹಿತ್ಯ: ಹಿರಿಯ ಪತ್ರಕರ್ತೆ ಡಾ.ಆರ್. ಪೂರ್ಣಿಮಾ

Update: 2018-12-16 16:35 GMT

ಬೆಂಗಳೂರು, ಡಿ.16: ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆಗೆ ಇವತ್ತಿನ ಸಾಹಿತ್ಯ ಹೇಗೆ ಸ್ಪಂದಿಸುತ್ತಿದೆ ಎಂಬುದೂ ಮುಖ್ಯವಾಗಿರುತ್ತದೆ. ಸಮಾಜದಲ್ಲಿ ಏನು ನಡೆಯುತ್ತದೆಯೋ ಎಂಬುದರ ಪ್ರತಿಬಿಂಬವೇ ಸಾಹಿತ್ಯ ಎಂದು ಹಿರಿಯ ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತುಲನ ಪ್ರಕಾಶನ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ, ಎಂ.ಆರ್.ಆನಂದ ವಿರಚಿತ ‘ಕಥಾಕಲರವ’ ಮತ್ತು ‘ಮೊಗ್ಗರಳುವಾಗ’ ಎರಡು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯ ಎಂಬುದು ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕನ್ನಡಿ ಇದ್ದಂತೆ. ಹೀಗಾಗಿ, ಸಾಹಿತ್ಯ ಕೆಲವೇ ಜನರ ಪರವಾಗಿದೆಯಾ ಅಥವಾ ಸಮಾಜದ ಪರವಾಗಿದೆಯಾ ಎಂಬುದನ್ನು ಗಮನಿಸಬೇಕಿದೆ ಎಂದು ತಿಳಿಸಿದರು.

ಸಾಹಿತ್ಯದಲ್ಲಿ ಸಾಮಾಜಿಕ ದೃಷ್ಟಿಕೋನದ ಅಗತ್ಯತೆ ಇರಬೇಕು. ಸಮಾಜದಲ್ಲಿ ಏನು ಬೇಕಾದರೂ ಆಗಲಿ, ತಮ್ಮ ಪಾಡಿಗೆ ತಾವು ಬರೆಯುತ್ತೇವೆ ಎಂಬ ಲೇಖಕರ, ಸಾಹಿತಿಗಳ ವರ್ಗವೇ ಬೇರೆಯಾಗಿರುತ್ತದೆ. ಆದರೆ ಪ್ರಜ್ಞಾವಂತ ಲೇಖಕ, ಸಾಹಿತಿಗಳಾದವರು ತಮ್ಮ ಬರವಣಿಗೆ, ಗ್ರಹಿಕೆಯ ಮೂಲಕವೇ ತಮ್ಮದೇ ವ್ಯಾಖ್ಯಾನವನ್ನು ಹೇಳದೇ ಇರಲು ಸಾಧ್ಯವಿಲ್ಲ ಎಂದರು.

ಉಷಾ ನರಸಿಂಹನ್ ಮಾತನಾಡಿ, ಎಂ.ಆರ್.ಆನಂದರವರ ವಸ್ತುನಿಷ್ಠೆ, ತುಂಬ ಸರಳ ನುಡಿಯ ಮೂಲಕ ಎರಡು ಕೃತಿಗಳು ಕಲಾತ್ಮಕವಾದ ವಿಶೇಷ ಕಥನವಾಗಿ ಸಾಹಿತ್ಯ ಲೋಕದ ಎಲ್ಲ ಯಶೋ ಲಾಭಗಳನ್ನು ಪಡೆದುಕೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ. ಭಾಷೆ, ವಿಷಯಗಳ ವಿಚಾರದಲ್ಲಿ ಬ್ಯಾಂಕ್ ನಿವೃತ್ತಿಯ ನಂತರ ಎಂ.ಆರ್.ಆನಂದ ಅವರು ತೆರೆದ ಮನಸ್ಸಿನ ಉತ್ತಮ ಕಥೆಗಾರರಾಗಿ ಹೊರ ಹೊಮ್ಮಿದ್ದಾರೆ ಎಂದು ತಿಳಿಸಿದರು.

ಎಂ.ಆರ್.ಆನಂದ ಮಾತನಾಡಿ, ಚಿಕ್ಕಂದಿನಿಂದಲೂ ಸಾಹಿತ್ಯದ ಅಭಿರುಚಿಯನ್ನು ಹೊಂದಿದ್ದ ನಾನು, ಕಾಲೇಜುಗಳಲ್ಲಿ ಕಥೆ, ಕವನಗಳನ್ನು ರಚಿಸುತ್ತಿದ್ದೆ. ಬ್ಯಾಂಕ್ ಹುದ್ದೆ ನಿವೃತ್ತಿಯ ನಂತರ ಸಾಹಿತ್ಯ ದಾಸೋಹ ಬಳಗದಲ್ಲಿ ಕಥೆ, ಕವನಗಳನ್ನು ಬರೆದು ಅನೇಕ ಸಾಹಿತಿಗಳ ಸಹಕಾರದಿಂದ ಇಂದು ಎರಡು ಕೃತಿಗಳನ್ನು ಹೊರತಂದಿದ್ದೇನೆ. ಯಶಸ್ಸಿನ ಬಗ್ಗೆ ಚಿಂತಿಸುವುದಿಲ್ಲ. ಕಥೆ ಬರೆಯುವ ಕ್ರಿಯೆಯನ್ನು ಮುಂದುವರೆಸುತ್ತೇನೆ. ಅದು ನನಗೆ ಸಂತೋಷ ಕೊಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಥೆಗಾರ ಈಶ್ವರಚಂದ್ರ, ಲೇಖಕ ಕೃಷ್ಣಸುಬ್ಬರಾವ್, ಕೆ.ಆರ್.ಸಾಗರ ಪ್ರಾಧ್ಯಾಪಕ ಡಾ.ಎಚ್.ಎನ್.ಮಂಜುರಾವ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News