ಸಂಪತ್ತು ಸಮಾನ ಹಂಚಿಕೆಯಾಗುವವರೆಗೂ ಮೀಸಲಾತಿ ಬೇಕು: ಬಸವ ಹರಳಯ್ಯ ಸ್ವಾಮೀಜಿ

Update: 2018-12-16 16:40 GMT

ಬೆಂಗಳೂರು, ಡಿ.16: ದೇಶದ ಸಂಪತ್ತು ಸಮಾನ ಹಂಚಿಕೆಯಾಗುವವರೆಗೂ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿ ಸುಧಾರಣೆಯಾಗುವವರೆಗೂ ಮೀಸಲಾತಿ ಅಗತ್ಯವಿದೆ ಎಂದು ಶಿವಶರಣ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ(ಸಂಯೋಜಕ) ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನ ಅಂಗವಾಗಿ ಸಂವಿಧಾನ ಉಳಿಸಿ ಮೀಸಲಾತಿ ಹೆಚ್ಚಿಸಿ ಎಂಬ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದಲ್ಲಿ ಇಂದಿಗೂ ಶೋಷಿತ ಸಮುದಾಯ ಆರ್ಥಿಕ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತೀರ ಹಿಂದುಳಿದಿದೆ. ಒಂದು ಕಡೆ ಮೀಸಲಾತಿಯನ್ನು ಬದಲಿಸುವ ಶಕ್ತಿಗಳು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿವೆ. ಮತ್ತೊಂದು ಕಡೆ ಸಂವಿಧಾನವನ್ನು ಬದಲಿಸುವವರು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶೋಷಿತರು ಜಾಗೃತಗೊಳ್ಳಬೇಕು. ಮೀಸಲಾತಿ ಎಂಬುದು ಭಿಕ್ಷೆಯಲ್ಲ, ನಮ್ಮ ಹಕ್ಕು. ಅದನ್ನು ಪಡೆಯಲು ಹೋರಾಡಬೇಕಿದೆ ಎಂದರು.

ಇಂದಿನ ಶೋಷಿತ ಸಮುದಾಯ ಮೀಸಲಾತಿಯ ಮೇಲೆ ಅವಲಂಬನೆಯಾಗದೇ ಕೈಗಳಿಗೆ ಕೆಲಸ ಕೊಟ್ಟು, ದುಡಿಯುವಂತಾಗಬೇಕು. ಬಸವಣ್ಣರ ಕಾಯಕವೇ ಕೈಲಾಸ ಎಂಬಂತೆ ದುಡಿಯುವ ಮೂಲಕ ಕೈಲಾಸ ಕಾಣಬೇಕು. ದಲಿತರು ಬೇರೆಯವರ ಎದುರು ಮಂಡಿಯೂರಿ ಬೇಡುವ ಬದಲಿಗೆ, ನಾವೇ ಒಂದಿಷ್ಟು ಮಂದಿಗೆ ನೀಡುವವರಂತಾಗಬೇಕು ಎಂದ ಅವರು, ಮೀಸಲಾತಿ ಇಂದು ಬಲಾಢ್ಯರ ಕೈಯಲ್ಲಿದೆ ಎಂದರು.

ಸಂವಿಧಾನ ವಿರೋಧಿಗಳು ದೇಶ ಬಿಟ್ಟುಹೋಗಲಿ: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮೇಲೆ ನಿರಂತರವಾದ ದಾಳಿ ನಡೆಯುತ್ತಲೇ ಇದೆ. ಸಂವಿಧಾನಾತ್ಮಕವಾಗಿ ಆಯ್ಕೆಗೊಂಡಿರುವ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ನಾವು ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಹೇಳುತ್ತಾರೆ. ಮತ್ತೊಂದು ಕಡೆ ಸಂವಿಧಾನದ ಪ್ರತಿಯನ್ನು ಸುಟ್ಟು ಅಂಬೇಡ್ಕರ್‌ಗೆ ಧಿಕ್ಕಾರ ಎಂದು ಕೂಗುತ್ತಾರೆ. ಇಂದು ನಾವು ಯಾವ ಸಂದರ್ಭದಲ್ಲಿದ್ದೇವೆ ಎಂದ ಅವರು, ಸಂವಿಧಾನ ವಿರೋಧಿಸುವವರು ದೇಶ ಬಿಟ್ಟು ಹೋಗಲಿ ಎಂದು ಹೇಳಿದರು.

ಸಂವಿಧಾನ ಉಳಿದಿದೆಯಾ...?: ಭಾರತದಲ್ಲಿ ಎಲ್ಲ ಧರ್ಮಗ್ರಂಥಗಳಿಗಿಂತಲೂ ಶ್ರೇಷ್ಠವಾದ ಗ್ರಂಥ ಸಂವಿಧಾನ. ಆದರೆ, ಮನುವಾದಿಗಳಿಂದು ಅದನ್ನೇ ಬುಡಮೇಲು ಮಾಡಲು ಮುಂದಾಗಿದ್ದಾರೆ. ಆರ್‌ಬಿಐನ ಗವರ್ನರ್ ಪತ್ರಿಕಾಗೋಷ್ಠಿ ಮಾಡಿ ನಮಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ. ಮತ್ತೊಂದು ಕಡೆ ಸಂವಿಧಾನದ ಪ್ರಧಾನ ಸಂಸ್ಥೆ ನ್ಯಾಯಾಂಗದ ನ್ಯಾಯಾಧೀಶರು ಬೀದಿಗೆ ಬಂದು ನಮಗೆ ನ್ಯಾಯ ದೊರಕಿಸಿಕೊಡಿ ಎನ್ನುವ ಸ್ಥಿತಿಗೆ ತಲುಪಿದೆ. ಅಂದರೆ ಇಂದಿಗೂ ಸಂವಿಧಾನ ಉಳಿದಿದೆಯಾ ಎಂಬ ಪ್ರಶ್ನೆ ಕಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯದ ಪ್ರಾದ್ಯಾಪಕ ಡಾ.ಬಿ.ಗುರುರಾಜ್ ಮಾತನಾಡಿ, ಪರಿಶಿಷ್ಟರಿಗೆ ಸಂವಿಧಾನಾತ್ಮಕವಾಗಿ ಶೇ.15 ರಷ್ಟು ಮೀಸಲಾತಿ ಸಿಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟ ಜಾತಿಯೊಳಗೆ ಹಲವು ಜಾತಿಗಳನ್ನು ಸೇರ್ಪಡೆ ಮಾಡಿರುವುದರಿಂದ ಎಲ್ಲರಿಗೂ ಮೀಸಲಾತಿಯ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ದಲಿತ ಹೆಸರಿನಲ್ಲಿ ರಾಜಕೀಯ ಮಾಡುವವರ ಸಂಖ್ಯೆ ಅಧಿಕವಾಗುತ್ತಿದೆ. ದಲಿತರು ಒಂದಾಗಲು ಕೆಲವರು ಉದ್ದೇಶಪೂರ್ವಕವಾಗಿ ಅಡ್ಡಗಾಲು ಹಾಕುತ್ತಿದ್ದಾರೆ. ಹೀಗಾಗಿ, ದಲಿತರು ವೈಜ್ಞಾನಿಕ ಜ್ಞಾನ ಪಡೆಯಬೇಕು. ಕೆಲವರ ಮಾತುಗಳಿಗೆ ಮರುಳಾಗದೇ ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ.ಕೆ.ಗೋಖಲೆ, ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ರಮೇಶ್, ಮೈಸೂರಿನ ದೈಹಿಕ ಶಿಕ್ಷಣದ ನಿರ್ದೇಶಕಿ ಡಾ.ಕೆ.ಸಂಗೀತ, ಸಂಘದ ಅಧ್ಯಕ್ಷ ಎಚ್.ಮಹಾಂತೇಶ್, ಮುಖಂಡ ಟಿ.ದೇವರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News