ಟೂರ್ ಆಫ್ ನೀಲಗಿರೀಸ್ ದೇಶದ ಅತಿದೊಡ್ಡ ಸೈಕ್ಲಿಂಗ್ ಟೂರ್: ಸತೀಶ್ ಬೆಳವಾಡಿ

Update: 2018-12-16 17:12 GMT

ಬೆಂಗಳೂರು, ಡಿ.16: ಟೂರ್ ಆಫ್ ನೀಲಗಿರೀಸ್ ಇಂದು ಭಾರತದ ಅತ್ಯಂತ ಕಷ್ಟಕರ ಹಾಗೂ ಅತಿದೊಡ್ಡ ಸೈಕ್ಲಿಂಗ್ ಟೂರ್ ಎನ್ನುವ ಗೌರವ ಪಡೆದುಕೊಂಡಿದೆ. ಸವಾಲು, ಅಡೆತಡೆ ಹಾಗೂ ಸಹಿಷ್ಣುತೆಗಳನ್ನು ಪರೀಕ್ಷಿಸಿ ಸೈಕ್ಲಿಂಗ್‌ನ ಪ್ರತಿಭೆಗಳಿಗೆ ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ಟೂರ್ ಆಫ್ ನೀಲಗಿರೀಸ್‌ನ ಟೂರ್ ನಿರ್ದೇಶಕ ಸತೀಶ್ ಬೆಳವಾಡಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ರೈಡ್ ಎ ಸೈಕಲ್ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷ ನಡೆಯುವ ಟೂರ್ ಆಫ್ ನೀಲಗಿರೀಸ್ ಯಶಸ್ವಿಯಾಗಿ ಮುಕ್ತಾಯವಾಗಿರುವ ಕುರಿತು ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಹಲವಾರು ಸೈಕ್ಲಿಸ್ಟ್‌ಗಳು ಟೂರ್ ಆಫ್ ನೀಲಗಿರೀಸ್ ಬಗ್ಗೆ ಸಾಕಷ್ಟು ಆಸಕ್ತಿ ತೋರಿದ್ದಾರೆ. ಮುಂದೆ ಈ ಟೂರ್ನಿ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

ಐತಿಹಾಸಿಕ ಟೂರ್‌ನ ಬಗ್ಗೆ ಪ್ರತಿಕ್ರಿಯೆ ನೀಡಿದ ಟಿಎಫ್‌ಎನ್ 2018ನ ಟೂರ್ ಸಹಾಯಕ ನಿರ್ದೇಶಕ ಬದ್ರೀನಾಥ್ ಶಾಸ್ತ್ರಿ, ಕೂಟದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಹಾಗೂ ಜಾಗತಿಕ ಹಾಗೂ ದೇಶೀಯ ಮಟ್ಟದಲ್ಲಿ ಸೈಕ್ಲಿಂಗ್ ಪ್ರತಿಭೆಗಳನ್ನು ಗುರುತಿಸಲು ಪ್ರತಿವರ್ಷ ನಾವು ಹೊಸ ಸವಾಲುಗಳನ್ನು ಇವರ ಮುಂದಿಡಲು ಪ್ರಯತ್ನಿಸುತ್ತೇವೆ ಎಂದರು. ಸೈಕ್ಲಿಸ್ಟ್‌ಗಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು, ವರ್ಷಂಪ್ರತಿ ಟಿಎಫ್‌ಎನ್‌ನಲ್ಲಿ ಪಾಲ್ಗೊಳ್ಳುವ ಅಥ್ಲೀಟ್‌ಗಳಿಗೆ ಅಚ್ಚರಿ ನೀಡಬೇಕು ಎನ್ನುವ ಕಾರಣಕ್ಕೆ ಮಾರ್ಗಗಳನ್ನು ಬಹಳ ಎಚ್ಚರಿಕೆಯಿಂದ ಆರಿಸಲಾಗಿದೆ ಎಂದು ಅವರು ಸ್ಮರಿಸಿದರು.

ಸಹ ಸಂಸ್ಥಾಪಕ ದೀಪಕ್ ಮಾತನಾಡಿ, 2018ರ ಟಿಎಫ್‌ಎನ್ ಮುಗಿಯುತ್ತಿದ್ದಂತೆ, 2019ರಲ್ಲಿ ನಡೆಯಲಿರುವ 12ನೇ ಆವೃತ್ತಿಯ ಟಿಎಫ್‌ಎನ್ ಮಾರ್ಗದ ಕುರಿತಾಗಿ ಸೈಕ್ಲಿಸ್ಟ್‌ಗಳಲ್ಲಿ ಕುತೂಹಲ ಆರಂಭಗೊಂಡಿದೆ ಎಂದು ತಿಳಿಸಿದರು. ಆರ್‌ಎಸಿಎಫ್‌ನ ಅನುಭಗಳ ತಂಡ ಮುಂದಿನ ಎರಡು ತಿಂಗಳಿನಲ್ಲಿ ಸಭೆ ಸೇರಲಿದ್ದು, ಮುಂದಿನ ಆವೃತ್ತಿಗಳ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಿದೆ. 2019ರ ಟಿಎಫ್‌ಎನ್‌ನ ನೋಂದಣಿ ಕಾರ್ಯ 2019ರ ಮೇ 1 ರಂದು ಆರಂಭಗೊಳ್ಳಲಿದೆ. ವಿಶ್ವಮಟ್ಟದ ಸೈಕ್ಲಿಂಗ್‌ನ ಅಗಾಧ ಪ್ರತಿಭೆಗಳನ್ನು ಆಕರ್ಷಿಸಲಿದ್ದೇವೆ ಎನ್ನುವ ಅಚಲ ವಿಶ್ವಾಸ ನಮ್ಮಲ್ಲಿದೆ ಎಂದು ತಿಳಿಸಿದರು.

11ನೇ ಆವೃತ್ತಿ: 2018ರ ಟೂರ್ ಆಫ್ ನೀಲಗಿರೀಸ್‌ನ ಪ್ರಮುಖವಾದ ಅಂಶವೆಂದರೆ ದಾಖಲೆ ಎನಿಸುವಂಥ ವಿದೇಶಿ ಹಾಗೂ ಮಹಿಳಾ ಸೈಕ್ಲಿಸ್ಟ್‌ಗಳು ಸ್ಪರ್ಧೆ ಮಾಡಿದ್ದು, ದೇಶದಿಂದ ಒಟ್ಟಾರೆ 29 ಹಾಗೂ 18 ಮಹಿಳಾ ರೈಡರ್‌ಗಳು ಈ ಬಾರಿಯ ಟಿಎಫ್‌ಎನ್‌ನಲ್ಲಿ ಕಣಕ್ಕಿಳಿದಿದ್ದರು. ಅದಲ್ಲದೆ, ಟಿಎಫ್‌ಎನ್ ಇತಿಹಾಸದಲ್ಲೇ ಹಿಂದೆಂದೂ ನೋಡಿಲ್ಲದಂತ ಹಾಸನ ಹಾಗೂ ಕುಶಾಲನಗರದ ಮಾರ್ಗದಲ್ಲಿನ ಬೆಟ್ಟ ಗುಡ್ಡಗಳ ಹೊಸ ದಾರಿಯನ್ನು 11ನೇ ಆವೃತ್ತಿಯಲ್ಲಿ ಪರಿಚಯಿಸಲಾಯಿತು

ಪುರುಷ ವಿಜೇತರು

ನವೀನ್ ಜಾನ್ (ಭಾರತ) ನಿಲ್ಸ್ ಈಗಿಲ್ ಬ್ರಾಡ್ಟ್ಬ್‌ರ್ಗಾ (ಡೆನ್ಮಾರ್ಕ್) ಕ್ಲಿಂಟನ್ ಲ್ಯಾನ್ ಲೆಯಾಂಗ್ (ಆಸ್ಟ್ರೇಲಿಯಾ)

ಮಹಿಳಾ ವಿಜೇತರು

ಕಟ್ಜಾ-ಲಿಲ್ ಜೆನ್ಸನ್ (ಡೆನ್ಮಾರ್ಕ್) ಲೆನಾ ಮರೈಕೆ ಜೋಸ್ಫೈನ್ ರಾಬ್ರಾ (ಜರ್ಮನಿ) ಕೊರಾ ವ್ಯಾನ್ ಲೇರ್ (ಬೆಲ್ಜಿಯಂ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News