ಬೆಳ್ಳಳ್ಳಿ ಕೋರೆ ಒಂದು ತಿಂಗಳಲ್ಲಿ ಭರ್ತಿ: ತಲೆ ನೋವಾದ ಕಸ ವಿಲೇವಾರಿ

Update: 2018-12-16 17:15 GMT

ಬೆಂಗಳೂರು,ಡಿ.16: ನಗರದ ಕಸವಿಲೇವಾರಿ ಘಟಕವಿರುವ ಬೆಳ್ಳಳ್ಳಿ ಕೋರೆಯು ತುಂಬಿ ತುಳುಕುತ್ತಿದ್ದು, ಇನ್ನೊಂದು ತಿಂಗಳಲ್ಲಿ ಸಂಪೂರ್ಣ ಭರ್ತಿಯಾಗಲಿದೆ. ಇದೀಗ ಕಸ ಸುರಿಯುವುದು ಎಲ್ಲಿ ಎಂದು ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ.

ಉದ್ಯಾನನಗರಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಕಸದ ಸಮಸ್ಯೆ ಉಲ್ಬಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ನಗರದ ಬೆಳ್ಳಳ್ಳಿ ಕೋರೆಯು ಸಂಪೂರ್ಣ ಕಸದಿಂದ ತುಂಬಿಹೋಗಿದೆ. ಹೊಸದಾಗಿ ಮೂರು ಘಟಕಗಳ ಆರಂಭಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಅಲ್ಲದೆ, ಉಪ ಮುಖ್ಯಮಂತ್ರಿ ಈ ಸಂಬಂಧ ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ನಗರದಲ್ಲಿ ಪ್ರತಿ ದಿನ 2000 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಇದನ್ನು ನಗರದ ಹೊರ ವಲಯದ ಬೆಳ್ಳಳ್ಳಿ ಕೋರೆಗೆ ಸುರಿಯಲಾಗುತ್ತಿತ್ತು. ಆದರೆ, ಇದೀಗ ಅದೂ ಭರ್ತಿಯಾಗಲಿದೆ. ಹೀಗಾಗಿ ಹೊಸದಾಗಿ ಉಲ್ಲಳ್ಳಿ ಕೋರೆ, ಮಾರೇನಹಳ್ಳಿ ಕೋರೆ ಹಾಗೂ ಬಾಗಲೂರು ಕೋರೆಗಳ ತಪಾಸಣೆ ನಡೆಸಿದ್ದು, ಕಸ ಹಾಕಲು ಅನುಮತಿ ನೀಡುವಂತೆ ಸರಕಾರಕ್ಕೆ ಪಾಲಿಕೆ ಪ್ರಸ್ತಾವನೆ ಸಲ್ಲಿಸಿದೆ. ಸರಕಾರ ಅನುಮತಿ ನೀಡಿದರೆ ಮೂರು ವರ್ಷಗಳ ಕಾಲ ಕಸ ಸುರಿಯಲು ಯಾವುದೇ ತೊಂದರೆಯಾಗುವುದಿಲ್ಲ. ಇಲ್ಲದಿದ್ದರೆ ಬೆಂಗಳೂರು ನಗರದಲ್ಲಿ ಮತ್ತೊಮ್ಮೆ ಎಲ್ಲೆಂದರಲ್ಲಿ ಕಸ ಕಾಣಸಿಗುತ್ತದೆ.

ನಗರದಲ್ಲಿ ಕಸದ ಸಮಸ್ಯೆ ಇಂದು ನಿನ್ನೆಯದಲ್ಲ. ಆಗಾಗ ಕಸ ಸಮಸ್ಯೆ ಎದುರಾಗುತ್ತಲೇ ಇದೆ. ಅದಕ್ಕೆ ಸರಕಾರ ಹಾಗೂ ಪಾಲಿಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದು, ಕೂಡಲೇ ಸರಕಾರ ಪಾಲಿಕೆ ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ನೀಡದಿದ್ದರೆ ಮತ್ತಷ್ಟು ಸಮಸ್ಯೆ ಹೆಗಲೇರಿಕೊಳ್ಳಲಿದೆ ಎಂದು ಹೇಳಿದ್ದಾರೆ.

ನಗರದ ಹೊರವಲಯದಲ್ಲಿ ಪರಿಶೀಲನೆ ನಡೆಸಿರುವ ಮೂರು ಕೋರೆಗಳಲ್ಲಿ ಎರಡು ಕೋರೆಗಳಲ್ಲಿ ಕಸ ವಿಲೇವಾರಿಗೆ ಅನುಮತಿ ಸಿಕ್ಕಿದೆ. ನಗರದ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.

-ರಂದೀಪ್, ವಿಶೇಷ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News