ಬ್ರಿಟನ್‌ನಲ್ಲಿ ವಿಜಯ್ ಮಲ್ಯಗೆ ಮತ್ತೊಂದು ಕಂಟಕ

Update: 2018-12-17 04:00 GMT

ಲಂಡನ್, ಡಿ. 17: ವಿವಾದಾತ್ಮಕ ಉದ್ಯಮಿ ವಿಜಯ್ ಮಲ್ಯಗೆ ಬ್ರಿಟನ್‌ನಲ್ಲಿ ಮತ್ತೊಂದು ಕಂಟಕ ಎದುರಾಗಿದ್ದು, ಇದೀಗ ಲಂಡನ್ ಕೋರ್ಟ್‌ನಲ್ಲಿ ದಿವಾಳಿತನ ಪ್ರಕ್ರಿಯೆ ವಿಚಾರಣೆ ಎದುರಿಸಲಾಗುತ್ತಿದೆ.

ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ನೀಡಿದ 1.145 ಶತಕೋಟಿ ಪೌಂಡ್ ಮೊತ್ತದ ಸಾಲಕ್ಕೆ ಜಾಮೀನು ನೀಡಿರುವ ಮಲ್ಯ ವಿರುದ್ಧ ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಇತರ 12 ಸಾಲ ನೀಡಿದ ಸಂಸ್ಥೆಗಳು ದಾವೆ ಹೂಡಿದ್ದು, ಲಂಡನ್ ಕೋರ್ಟ್ ಇದನ್ನು ವಿಚಾರಣೆಗೆ ಸ್ವೀಕರಿಸಿದೆ.

ಸಾಲದಾರ ಸಂಸ್ಥೆಗಳು ಮೇ 8ರಂದು ಹೈಕೋರ್ಟ್‌ನ ವಾಣಿಜ್ಯ ನ್ಯಾಯಾಲಯದಲ್ಲಿ ಪ್ರಕರಣ ಗೆದ್ದಿವೆ. ಈ ಸಂಬಂಧ ಮಲ್ಯರ ಅರ್ಜಿಯನ್ನು ತಿರಸ್ಕರಿಸಿ, ಮಲ್ಯರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಭಾರತದ ಸಾಲ ವಸೂಲಾತಿ ನ್ಯಾಯಮಂಡಳಿ ನೀಡಿದ ತೀರ್ಪನ್ನು ತಳ್ಳಿಹಾಕಿತ್ತು.

ಕಳೆದ ಜೂನ್‌ನಲ್ಲಿ ಹೈಕೋರ್ಟ್‌ನ ವ್ಯಾಪಾರ ಮತ್ತು ಆಸ್ತಿ ನ್ಯಾಯಾಲಯ ಮಲ್ಯ ಅವರ ಆಸ್ತಿಗಳ ಶೋಧನೆ ಮತ್ತು ಮುಟ್ಟುಗೋಲಿಗೆ ಆದೇಶ ನೀಡಿತ್ತು. ಆದರೆ ಕಾನೂನು ತಜ್ಞರು ಹೇಳುವಂತೆ ಈ ತೀರ್ಪು ಜಾರಿಗೊಳಿಸಲು ಅವಕಾಶವಿರಲಿಲ್ಲ. ಇದೀಗ ಎಸ್‌ಬಿಐ ಹಾಗೂ ಇತರ ಸಾಲದಾರ ಸಂಸ್ಥೆಗಳು, ಬ್ಯಾಂಕ್ ಸಾಲ ಸಂಬಂಧ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಮಲ್ಯರನ್ನು ದಿವಾಳಿ ಎಂದು ಘೋಷಿಸಲು ದಾವೆ ಹೂಡಿವೆ. ಆದರೆ ಈ ಬಗ್ಗೆ ಮೇಲ್ಮನವಿ ಸಲ್ಲಿಸಲು ಮಲ್ಯ ಯೋಚಿಸುತ್ತಿದ್ದಾರೆ. ಆದರೆ ಕಾನೂನು ತಜ್ಞರ ಪ್ರಕಾರ ಅವರ ವಾದ ನ್ಯಾಯಾಲಯದಲ್ಲಿ ಮಾನ್ಯವಾಗುವ ಸಾಧ್ಯತೆ ಕಡಿಮೆ.
ಭಾರತಕ್ಕೆ ಗಡೀಪಾರಾಗುವುದನ್ನು ತಡೆಯುವ ನಿಟ್ಟಿನಲ್ಲಿ ಮಲ್ಯ ಪ್ರಯತ್ನ ವಿಫಲವಾಗಿದ್ದು, ಕಳೆದ ವಾರವಷ್ಟೇ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿ, ಮಲ್ಯ ಗಡೀಪಾರಿಗೆ ಅನುಮತಿ ನೀಡಿತ್ತು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಲ್ಯಗೆ 14 ದಿನಗಳ ಕಾಲಾವಕಾಶವಿದ್ದು, ಬ್ರಿಟನ್‌ನ ಗಡೀಪಾರು ಕಾಯ್ದೆ- 2003ರ ಅನ್ವಯ ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News