"ಕಾಂಗ್ರೆಸ್ ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮ ಪ್ರತಿಪಕ್ಷಗಳ ಮಹಾಮೈತ್ರಿಗೆ ಮತ್ತೊಂದು ವೇದಿಕೆ"
ಬೆಂಗಳೂರು, ಡಿ.17: ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮಗಳು ಪ್ರತಿಪಕ್ಷಗಳ ಮಹಾಮೈತ್ರಿಗೆ ಮತ್ತೊಂದು ವೇದಿಕೆಯಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಣ್ಣಿಸಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಪ್ರಮಾಣವಚನ ಸ್ವೀಕರಿಸಿದ ಅಶೋಕ್ ಗೆಹ್ಲೋಟ್, ಕಮಲ್ ನಾಥ್, ಯುವ ನಾಯಕ ಸಚಿನ್ ಪೈಲಟ್ ಗೆ ಶುಭಾಶಯಗಳು. ಮುಖ್ಯವಾಗಿ ಇಂದು ನಡೆಯಲಿರುವ ಸಮಾರಂಭಗಳು ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ್ದಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ನಮ್ಮನ್ನು ಬಿಟ್ಟರೆ ಮತ್ತೊಬ್ಬರಿಲ್ಲ ಎನ್ನುವವರಿಗೆ ಸ್ಪಷ್ಟ ಸಂದೇಶ ರವಾನಿಸುತ್ತಿವೆ. ಇದು ಮಹಾಮೈತ್ರಿಯ ಮತ್ತೊಂದು ವೇದಿಕೆಯಾಗಿದೆ ಎಂದು ಟ್ವೀಟ್ ಮೂಲಕ ಬಿಜೆಪಿ ನಾಯಕರಿಗೆ ಚಾಟಿ ಬೀಸಿದ್ದಾರೆ. ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ಸನ್ನು ಒಳಗೊಂಡಂತೆಯೇ ಮಹಾಮೈತ್ರಿಗೆ ಮುಂದಾಗಿದ್ದಾರೆ. ಈ ಕಾರಣದಿಂದಲೇ ಸಿಎಂ ಕುಮಾರಸ್ವಾಮಿ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ನಡೆಯುವ ಕಾಂಗ್ರೆಸ್ ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮಕ್ಕೆ ಭಾಗಿಯಾಗಿರುವುದು ತೃತೀಯ ರಂಗದ ಒಗ್ಗೂಡುವಿಕೆಗೆ ಸಾಕ್ಷಿಯಾಗಲಿದೆ ಎಂದು ಹೇಳಲಾಗುತ್ತಿದೆ.