ಆ್ಯಂಬಿಡೆಂಟ್ ಪ್ರಕರಣ ಮುಚ್ಚಿ ಹಾಕಲು ಸಿಸಿಬಿ 30 ಕೋಟಿ ಲಂಚ ಪಡೆದಿದೆ: ರವಿ ಕೃಷ್ಣಾರೆಡ್ಡಿ ಗಂಭೀರ ಆರೋಪ

Update: 2018-12-17 14:01 GMT

ಬೆಂಗಳೂರು, ಡಿ.17: ಆ್ಯಂಬಿಡೆಂಟ್ ವಂಚನೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಕರಣದ ಪ್ರಮುಖ ಆರೋಪಿ ಸೆಯ್ಯದ್ ಫರೀದ್ ಕೆಲ ಸಿಸಿಬಿ ತನಿಖಾಧಿಕಾರಿ ಗಳಿಗೆ 30 ಕೋಟಿ ಲಂಚ ನೀಡಿರುವ ಗಂಭೀರ ಆರೋಪ ಇದೆ ಎಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನನ್ನು ತೀವ್ರ ವಿಚಾರಣೆಗೆ ಒಳಪಡಿಸದಂತೆ ಮತ್ತು ತನ್ನ ಕಂಪನಿಯ ಮೇಲೆ ತನಿಖೆ ನಡೆಸದಂತೆ ಕೆಲವು ಪೊಲೀಸ್ ಅಧಿಕಾರಿಗಳಿಗೆ ಸೆಯ್ಯದ್ ಫರೀದ್ 30ಕೋಟಿ ರೂ. ಹಣ ನೀಡಿದ್ದಾನೆ ಎನ್ನಲಾಗಿದ್ದು, ಪೊಲೀಸರಿಗೆ ಹಣ ನೀಡಿರುವುದಾಗಿ ಫರೀದ್ ಅನೇಕ ಜನರ ಬಳಿ ಹೇಳಿಕೊಂಡಿದ್ದಾನೆ ಎಂದು ಆರೋಪಿಸಿದರು.

ಇದರ ಬಗ್ಗೆ ಸಾಕಷ್ಟು ಸಾಕ್ಷಾಧಾರಗಳಿಲ್ಲದೇ ನಾವು ಮಾತನಾಡುವುದು ಒಳ್ಳೆಯ ನಡೆಯಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಕರಣದ ತನಿಖೆ ಹೋಗುತ್ತಿರುವ ದಿಕ್ಕನ್ನು ನೋಡಿದರೆ, ನಮಗೆ ನಂಬಲಾರ್ಹ ಮೂಲಗಳಿಂದ ಬಂದಿರುವ ಮಾಹಿತಿಯನ್ನು ಜನರ ಮುಂದೆ ಇಡಬೇಕಾದ ನೈತಿಕ ಒತ್ತಡಕ್ಕೆ ಸಿಲುಕಿದ್ದೇವೆ. ಮಾಹಿತಿ ಬಹಿರಂಗದಿಂದ ಮುಂದಿನ ದಿನಗಳಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿಗಳು ವಂಚಕರನ್ನು ಬಚಾವು ಮಾಡಲು ಹಿಂದೆ ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರು ಪೂರ್ವ ವಲಯದ ಡಿಸಿಪಿ ಅಜಯ್ ಹಿಲೋರಿ ಆ್ಯಂಬಿಡೆಂಟ್ ಕಂಪೆನಿಯ ವಿರುದ್ಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ನಾಲ್ಕು ದೂರುಗಳಿಗೆ, ಒಂದು ದೂರಿಗೆ ತಲಾ 5ಕೋಟಿ ರೂ. ನಂತೆ 20 ಕೋಟಿ ರೂ. ಪಡೆದಿದ್ದಾರೆ. ನಗರ ಪೊಲೀಸ್ ಕಮೀಷನರ್ ಸುನೀಲ್ ಕುಮಾರ್ 5 ಕೋಟಿ ರೂ., ಪೂರ್ವ ವಲಯದ ಎಸಿಪಿ ಸೀಮಂತ್ ಕಮಾರ್ ಸಿಂಗ್ 3 ಕೋಟಿ ರೂ., ಸಿಸಿಬಿಯ ಹಿಂದಿನ ಜಂಟಿ ಆಯುಕ್ತ ಸತೀಶ್ ಕುಮಾರ್ 3 ಕೋಟಿ ರೂ., ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ 1 ಕೋಟಿ ಪಡೆದಿದ್ದಾರೆ ಎಂದರು.

ಈ ಎಲ್ಲ ಅಧಿಕಾರಿಗಳು, ಒಂದು ಸ್ವತಂತ್ರ ತನಿಖಾ ಸಂಸ್ಥೆಯು ಪಾರದರ್ಶಕವಾಗಿ ನಡೆಸುವ ನಾರ್ಕೊ ಅನಾಲಿಸಿಸ್ ಹಾಗೂ ಬ್ರೈನ್ ಮ್ಯಾಪಿಂಗ್ ನಂತಹ ಸುಳ್ಳು-ಪತ್ತೆ ಪರೀಕ್ಷೆಗಳಿಗೆ ಒಳಪಡಬೇಕು. ಅಲ್ಲದೆ, ಇಷ್ಟೆಲ್ಲಾ ಆರೋಪಗಳು ಪೊಲೀಸ್ ಇಲಾಖೆಯ ಮೇಲೆ ಬಂದಿರುವುದರಿಂದ ಪೊಲೀಸ್ ಇಲಾಖೆ ಪ್ರಕರಣವನ್ನು ತನಿಖೆ ಮಾಡುವ ನೈತಿಕ ಅರ್ಹತೆಯನ್ನು ಕಳೆದುಕೊಂಡಿದೆ. ಹೀಗಾಗಿ, ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ರವಿ ಕೃಷ್ಣಾರೆಡ್ಡಿ ಆಗ್ರಹಿಸಿದರು.

ವೇದಿಕೆಯ ವತಿಯಿಂದ ಯಾವ ರಾಜಕಾರಣಿಗಳಿಗೆ ಸೆಯ್ಯದ್ ಫರೀದ್ ಲಂಚ ನೀಡಿದ್ದಾನೆ ಎನ್ನುವ ವಿವರಗಳನ್ನು ಸಂಗ್ರಹಿಸುತ್ತಿದ್ದು, ಆ್ಯಂಬಿಡೆಂಟ್, ಆಲಾ, ಇಂಜಾಜ್, ಅಜ್ಮೀರಾ ಸೇರಿದಂತೆ ಅನೇಕ ಕಂಪೆನಿಗಳಿಂದ ವಂಚನೆಗೊಳಗಾದ ಜನರಿಗೆ ನ್ಯಾಯ ಒದಗಿಸಿ, ಪರಿಹಾರಕ್ಕೆ ಆಗ್ರಹಿಸಿ ಡಿ.18ರಂದು ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News