×
Ad

ಹಿರಿಯ ಸಾಹಿತಿ ಡಾ.ಲೀಲಾವತಿ ದೇವದಾಸ್ ನಿಧನ

Update: 2018-12-17 20:16 IST

ಬೆಂಗಳೂರು, ಡಿ.17: ಹಿರಿಯ ವೈದ್ಯೆ ಹಾಗೂ ಸಾಹಿತಿ ಡಾ.ಲೀಲಾವತಿ ದೇವದಾಸ್ ತಮ್ಮ ವಯೋಸಹಜ ಅನಾರೋಗ್ಯದಿಂದ ಇಂದು(ಸೋಮವಾರ) ಮಧ್ಯಾಹ್ನ ವಿಜಯನಗರದಲ್ಲಿ ನಿಧನರಾಗಿದ್ದಾರೆ.

ಎಂಬಿಬಿಎಸ್‌ನಲ್ಲಿ ಸ್ವರ್ಣ ಪದಕ ಪಡೆದಿದ್ದ ಅವರು, ತಮ್ಮ ವೈದ್ಯಕೀಯ ವೃತ್ತಿಯನ್ನು ಜನಸೇವೆಗೆ ಮೀಸಲಿಟ್ಟವರು. ಹಿಂದುಳಿದ ಜಿಲ್ಲೆಗಳಾದ ಬಳ್ಳಾರಿ, ಬೀದರ್, ಕಲಬರ್ಗಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದರು.

ಇವರು ಆರೋಗ್ಯ, ಪ್ರವಾಸ ಕುರಿತಂತೆ ಸುಮಾರು 55 ಕೃತಿಗಳನ್ನು ರಚಿಸಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ. ಹೆರಿಗೆ(ಹಂಪಿ ವಿಶ್ವವಿದ್ಯಾಲಯ), ಹಳಿ ತಪ್ಪದ ಹೆರಿಗೆ, ಪವಿತ್ರ ನಾಡಿನ ಪ್ರವಾಸ, ಮುಸುಕಿನ ಗುದ್ದು, ಹೆಣ್ಣೇ-ನಿನ್ನ ಆರೋಗ್ಯ ಕಾಪಾಡಿಕೋ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ, ನಾನು ಗೌರಿಯ ಗರ್ಭಕೋಶ, ಸಮೃದ್ದ ಜೀವನ ಹೀಗೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಪ್ರಶಸ್ತಿಗಳು: 2017ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಇವರಿಗೆ, ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಸಹೋದಿಕಾ ಪ್ರಶಸ್ತಿ, ವೈದ್ಯಸಾಹಿತ್ಯ ಶ್ರೀ, ವೈದ್ಯಸಾಹಿತ್ಯ ರತ್ನ, ಸಮಾಜ ಸಾರಥಿ, ವಿಶ್ವೇಶ್ವರಯ್ಯ-ನವರತ್ನ ಪ್ರಶಸ್ತಿ, ಸಮಾಜ ಸಾರಥಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಸಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News