×
Ad

ಮಧ್ಯಪ್ರದೇಶ ಸಿಎಂ ಕಮಲ್‌ನಾಥ್ ರನ್ನು ಪಕ್ಷದಿಂದ ಉಚ್ಚಾಟಿಸಲಿ: ಬೆಂಗಳೂರಿನಲ್ಲಿ ಸಂಬೀತ್ ಪಾತ್ರ

Update: 2018-12-17 20:24 IST

ಬೆಂಗಳೂರು, ಡಿ.17: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಕಮಲ್‌ನಾಥ್ ಹೆಸರು ಪ್ರಸ್ತಾಪವಾಗಿದ್ದು, ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾ ಮಾಡಬೇಕೆಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಆಗ್ರಹಿಸಿದ್ದಾರೆ.

ಸೋಮವಾರ ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಖ್ ಹತ್ಯಾಕಾಂಡದ ತನಿಖೆ ನಡೆಸುತ್ತಿರುವ ನಾನಾವತಿ ಆಯೋಗ ಮುಖ್ಯಮಂತ್ರಿ ಕಮಲನಾಥ್ ಹೆಸರನ್ನ ಪ್ರಸ್ತಾಪಿಸಿತ್ತಲ್ಲದೆ, ಅಫಿಡವಿಟ್ ಮತ್ತು ಸಾಕ್ಷಗಳನ್ನ ಸಂಗ್ರಹಿಸಿ ವರದಿ ನೀಡಿದೆ. ಹೀಗಾಗಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದು ಸರಿಯಲ್ಲವೆಂದು ತಿಳಿಸಿದರು.

ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್‌ಗೆ ದಿಲ್ಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದು, ಇದರ ನೈತಿಕ ಹೊಣೆಹೊತ್ತು ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಇಂದಿರಾಗಾಂಧಿ ಹತ್ಯೆಯ ನಂತರ 1984 ನ.1ರಂದು ದಿಲ್ಲಿಯ ರಾಜ್ ನಗರದಲ್ಲಿ ಒಂದೇ ಕುಟುಂಬದ ಐವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಜ್ಜನ್ ಕುಮಾರ್ ದೋಷಿ ಎಂದು ನ್ಯಾಯಾಲಯ ಹೇಳಿದೆ. ಪ್ರಸ್ತುತ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಹೆಸರೂ ಈ ಪ್ರಕರಣದಲ್ಲಿದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News