ಅನಂತಕುಮಾರ್ ಅವರ ರಾಷ್ಟ್ರಪ್ರೇಮ ಆದರ್ಶಪ್ರಾಯ: ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ
ಬೆಂಗಳೂರು, ಡಿ. 17: ಇತ್ತಿಚೆಗೆ ನಮ್ಮನ್ನು ಅಗಲಿದ ಕೇಂದ್ರ ಸಚಿವ ಅನಂತಕುಮಾರ್ ಅವರ ನಿಷ್ಠೆ, ಧೈರ್ಯ, ಸ್ಥೈರ್ಯ ಹಾಗೂ ರಾಷ್ಟ್ರಪ್ರೇಮ ಆದರ್ಶಪ್ರಾಯ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಬಂಟರ ಸಂಘದಲ್ಲಿ ಜನಮನ ಸಂಸ್ಥೆ ಹಾಗೂ ಬಂಟರ ಸಂಘ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಅನಂತಕುಮಾರ್ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಅನಂತಕುಮಾರ್ ನಡೆದಂತೆ ನುಡಿಯುತ್ತಿದ್ದಂತಹ ಆದರ್ಶ ಪುರುಷ ಎಂದು ಬಣ್ಣಿಸಿದರು.
ಅನಂತಕುಮಾರ್ ಮಾಡಿದ ಕಾರ್ಯಗಳು ದೇಶದ ಜನರ ಮನಸ್ಸಿನಲ್ಲಿ ಎಂದೂ ಅಳಿಸದಂತೆ ಉಳಿಯುತ್ತವೆ. ಸಮಾಜ ಸೇವೆ ಹಾಗೂ ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ, ದೇಶದ ಅಭಿವೃದ್ದಿಗೆ ಕೊಡುಗೆಗಳನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
ಸಾಹಿತಿ ಪ್ರೇಮಾಭಟ್ ಮಾತನಾಡಿ, ಅನಂತಕುಮಾರ್ ಒಬ್ಬ ಪ್ರಖರ ಸೂರ್ಯ. ಪ್ರಖಂಡ ಶಕ್ತಿಯನ್ನು ಹೊಂದಿದ್ದ ಅವರು, ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅದಮ್ಯ ಚೇತನದಂತಹ ಸಂಸ್ಥೆಯ ಮೂಲಕ ಹಲವು ವರ್ಗಗಳ ಶ್ರೇಯೋಭಿವೃದ್ದಿಗೆ ಶ್ರಮಿಸಿದರು ಎಂದರು.
ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಸಂಸ್ಥೆಯ ಡಾ.ತೇಜಸ್ವಿನಿ ಅನಂತಕುಮಾರ್, ಜನಮನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಿ.ಜಿ.ಭಟ್, ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಬಿಬಿಎಂಪಿ ಸದಸ್ಯ ರವೀಂದ್ರ ಪಾಲ್ಗೊಂಡಿದ್ದರು.