ಖತರ್ ನ ಹಿರಿಯ ಕನ್ನಡಿಗ ಸಯ್ಯದ್ ಅಬ್ದುಲ್ ಹಯ್

Update: 2018-12-18 07:40 GMT

ಕೊಲ್ಲಿಯ ಶ್ರೀಮಂತ ದೇಶ ಖತರ್ ನ ಬೆಳವಣಿಗೆಯಲ್ಲಿ ಅಲ್ಲಿನ ಭಾರತೀಯ ಕಾರ್ಮಿಕರು ಮತ್ತು ಉದ್ಯಮಿಗಳ ಕೊಡುಗೆ ಅತ್ಯಮೂಲ್ಯ. ಈ ಅಂಶವನ್ನು ಅಲ್ಲಿಯ ಆಡಳಿತಗಾರರೂ ಹಲವು ಬಾರಿ ಒಪ್ಪಿದ್ದಾರೆ, ಶ್ಲಾಘಿಸಿದ್ದಾರೆ.

ಸದ್ಯ ಖತರ್ ದೇಶದಲ್ಲಿರುವ ಭಾರತೀಯರಲ್ಲಿ ಹೆಚ್ಚಿನವರು, ಗರಿಷ್ಠವೆಂದರೆ 25 ವರ್ಷ ಹಿಂದೆ ಇಲ್ಲಿಂದ ಅಲ್ಲಿಗೆ ಹೋದವರು. ಆದರೆ 6 ದಶಕಗಳ ಹಿಂದೆ ಖತರ್ ಗೆ ಹೋಗಿ ನೆಲೆಸಿದ ಮತ್ತು ಈಗಲೂ ಅಲ್ಲಿನ ನಿವಾಸಿಯಾಗಿರುವ ಒಬ್ಬ ಭಾರತೀಯ ಮಹನೀಯರಿದ್ದಾರೆ. ಅವರೇ ಸಯ್ಯದ್ ಅಬ್ದುಲ್ ಹಯ್.

ಯುವ ಸಯ್ಯದ್ ಅಬ್ದುಲ್ ಹಯ್

ತಮ್ಮ ಹಲವು ಅನನ್ಯ ವೈಶಿಷ್ಟ್ಯಗಳಿಗಾಗಿ ಜನಪ್ರಿಯರಾಗಿರುವ ಮತ್ತು ಎಲ್ಲರ ಗೌರವಕ್ಕೆ ಪಾತ್ರರಾಗಿರುವ ಮಂಗಳೂರಿನ ಈ ಹಿರಿಯ ಕನ್ನಡಿಗ ಖತರ್ ನಲ್ಲಿ ಅತ್ಯಂತ ದೀರ್ಘ ಕಾಲ ಸೇವೆ ಸಲ್ಲಿಸಿದ ಭಾರತೀಯ ಎಂಬ ಮನ್ನಣೆ ಗಳಿಸಿದ್ದಾರೆ.

ಇಂದು (ಡಿಸೆಂಬರ್ 18) ಖತರ್ ದೇಶದ ರಾಷ್ಟ್ರೀಯ ದಿನ. ಈ ಹಿನ್ನೆಲೆಯಲ್ಲಿ  ಖತರ್ ನ ರೇಡಿಯೋ ಆಲಿವ್ ತಂಡದವರು ತಮ್ಮ ರೆಡ್ ಕಾರ್ಪೆಟ್ ಎಂಬ ಕಾರ್ಯ ಕ್ರಮದಲ್ಲಿ ಸಯ್ಯದ್ ಅಬ್ದುಲ್ ಹಯ್ ಅವರ  ಜೊತೆ  ಒಂದು ಸವಿಸ್ತಾರ ಸಂಭಾಷಣೆ ನಡೆಸಿ ಪ್ರಸಾರ ಮಾಡಿದರು. ಸುಮಾರು ಅರ್ಧ ಗಂಟೆಯ ಸಂದರ್ಶನ, ಹಯ್ ಅವರ ಅನುಭವಪೂರ್ಣವಾದ ಚತುರ ಮಾತುಗಾರಿಕೆಯಿಂದಾಗಿ ಉದ್ದಕ್ಕೂ ಸ್ವಾರಸ್ಯಕರವಾಗಿತ್ತು. ಕೇಳುಗ ಸಮುದಾಯದಿಂದ ಅಪಾರ ಮೆಚ್ಚುಗೆ ಗಳಿಸಿತು. ಸಂದರ್ಶನ ನಡೆಸಿದ ಅನಿರುದ್ಧ್ ,  ಇದು ನಾನು ನನ್ನ ಬದುಕಿನಲ್ಲಿ ನಡೆಸಿದ ಈ ವರೆಗಿನ ಅತ್ಯಂತ ಅದ್ಭುತ ಸಂದರ್ಶನ ಎಂದರು. ಸಯ್ಯದ್ ಅಬ್ದುಲ್ ಹಯ್ ಯಂತಹ ಹಿರಿಯರು ನಮ್ಮ ಸ್ಟುಡಿಯೋಗೆ ಬಂದಿರುವುದು ನಮ್ಮ ಮಟ್ಟಿಗೆ ಅಭಿಮಾನ ಹಾಗೂ ಪ್ರತಿಷ್ಠೆಯ ವಿಷಯ  ಎಂದು ರೇಡಿಯೋ ಆಲಿವ್ ನಿರ್ದೇಶಕ ಅಮೀರ್ ಅಲಿ ಹೇಳಿದರು.

ಬಿಹಾರ ಸಿಎಂ ನಿತಿಶ್ ಕುಮಾರ್ ಜೊತೆ ಅಬ್ದುಲ್ ಹಯ್

ಸಯ್ಯದ್ ಅಬ್ದುಲ್ ಹಯ್, ಮೂಲತಃ ಮಂಗಳೂರಿನ ಬಿಕರ್ನಕಟ್ಟೆಯವರು. ಬಿಕರ್ನಕಟ್ಟೆ ಮಸೀದಿಯ ಆಸುಪಾಸಿನಲ್ಲಿ ಬೆಳೆದವರು. ಹಿರಿಯ ವಿದ್ವಾಂಸ ಹಾಗೂ ಪರ್ಷಿಯನ್ ಭಾಷಾ ತಜ್ಞ ಮೌಲಾನಾ ಸಯ್ಯದ್ ಯೂನಸ್ ಸಾಹೇಬರ ಹಿರಿಯ ಪುತ್ರ. 1959ರಲ್ಲಿ ಆಗಿನ್ನೂ 17ರ ಹರೆಯದಲ್ಲಿ ಉದ್ಯೋಗ ಅರಸುತ್ತ ಊರು ಬಿಟ್ಟು ಖತರ್ ಗೆ ಹೋದವರು. ಅವರು ಮೊದಲು ಹೋದದ್ದು ಮುಂಬೈಗೆ. ಮುಂಬೈ ತಲುಪಲು ಹಡಗಿನಲ್ಲಿ ಮೂರು ದಿನ ಪ್ರಯಾಣಿಸಬೇಕಿತ್ತು. ಅಲ್ಲಿ ವೀಸಾ ಮತ್ತಿತರ ಔಪಚಾರಿಕ ಕೆಲಸಗಳಿಗೆ ಮೂರು ವಾರ ತಗಲಿತ್ತು.  ಅಲ್ಲಿಂದ ದಾರಾ ಎಂಬ ಹಡಗಿನಲ್ಲಿ ಒಂದು ವಾರ ಕಡಲಲ್ಲಿ ಸಂಚರಿಸಿ ದೋಹಾ ಸೇರಿದ್ದರು.  ಮೊದಲು ಹಲವು ವರ್ಷ ನೌಕರಿ ಮಾಡಿದ ಹಯ್ ಅವರು ಮುಂದೆ ಸ್ವತಃ ವ್ಯಾಪಾರ ಆರಂಭಿಸಿದರು. ಅಲ್ ಮಾಹಾ ಎಂಬ ಸೂಪರ್ ಮಾರ್ಕೆಟ್ ಮಾಲಕರಾಗಿ ಹಲವಾರು ಭಾರತೀಯರಿಗೆ ಉದ್ಯೋಗ ನೀಡಿದರು. ಅವರು ಖತರ್ ನಲ್ಲಿ ಪ್ರಥಮವಾಗಿ ಉದ್ಯೋಗ ಸೇರಿದಾಗ ಅವರಿಗೆ ದೊರೆತ ಮಾಸಿಕ ವೇತನ ಕೇವಲ 350 ರೂ. ಮೂರು ತಿಂಗಳ ಬಳಿಕ 50 ರೂಪಾಯಿ ಹೆಚ್ಚು ಸಂಬಳ ಸಿಗತೊಡಗಿತ್ತು. ಖರ್ಚು ಕಳೆದು ಉಳಿದ ನೂರು ರೂಪಾಯಿಗಳನ್ನು ಮನೆಗೆ ಕಳಿಸಿದರೆ ಅದರಲ್ಲಿ ಮೂರು ರೂಪಾಯಿಯನ್ನು ಅಂಚೆಯವರಿಗೆ ಪಾವತಿಸಬೇಕಾಗುತ್ತಿತ್ತು.

ಖತರ್ ನಲ್ಲಿರುವ  ಮೂರು ತಲೆಮಾರುಗಳ  ಭಾರತೀಯರಿಗೆ, ಪಾಕಿಸ್ತಾನಿಗಳಿಗೆ ಮತ್ತು ಸ್ಥಳೀಯರಿಗೆ ಕನ್ನಡಿಗ ಅಬ್ದುಲ್ ಹಯ್ ಪರಿಚಿತರು. ಕನ್ನಡ, ತುಳು, ಬ್ಯಾರಿ ಭಾಷೆ ಮಾತ್ರವಲ್ಲ ಒಟ್ಟು 17 ಭಾಷೆಗಳನ್ನು ಮಾತನಾಡಬಲ್ಲ ಅದ್ಭುತ ಮಾತುಗಾರ ಅಬ್ದುಲ್ ಹಯ್, ಅರಬಿಗಳಂತೆಯೇ ಅರಬಿ ಮಾತನಾಡ ಬಲ್ಲರು, ಕೇರಳಿಗರಂತೆಯೇ ಮಲಯಾಳಂ ಮಾತನಾಡಬಲ್ಲರು. ಉರ್ದು ಹಾಗೂ ಪರ್ಷಿಯನ್ ಭಾಷೆಗಳಲ್ಲಂತೂ ಅವರಿಗೆ ಅಪಾರ ಪಾಂಡಿತ್ಯ ವಿದೆ. ಉರ್ದು ಮುಷಾಯಿರಾ (ಕವಿಗೋಷ್ಠಿ)ಗಳಲ್ಲಿ ಅಬ್ದುಲ್ ಹಯ್ ವಾಚಿಸಿದ ಕೆಲವು ಸ್ವರಚಿತ ದ್ವಿಪದಿಗಳು ಉರ್ದು ವಲಯಗಳಲ್ಲಿ ಬಹಳಷ್ಟು ಜನಪ್ರಿಯವಾಗಿವೆ.

ಉದಾ:

ಮಿಲೇ ಖುಷ್ಕ್ ರೋಟಿ ಜೋ ಆಝಾದ್ ರೆಹ್ಕರ್,

ವೊ ಖಉಫ್ ಓ ಝಿಲ್ಲತ್ ಕೆ ಹಲ್ವೆ ಸೆ ಬೆಹ್ತರ್ 

(ಸ್ವಾತಂತ್ರ್ಯವನ್ನು ಉಳಿಸಿಕೊಂಡು  ಸಿಗುವ ಒಣ ರೊಟ್ಟಿಯ ತುಂಡು,  ಭಯ ಮತ್ತು ಅಪಮಾನದ ಫಲವಾಗಿ ಸಿಗುವ ಹಲ್ವಕ್ಕಿಂತ ಉತ್ತಮ) 
ಇಷ್ಕ್ ಪರ್ ಕರ್ ದೂನ್ ಫಿದಾ ಮಯ್  ಅಪನೀ  ಸಾರಿ ನೇಮತೇನ್,
ಮಗರ್ ಆಝಾದಿ ಪೆ ಮೇರಾ ಇಷ್ಕ್ ಭೀ ಕುರ್ಬಾನ್ ಹೈ 

(ನಾನು ನನ್ನೆಲ್ಲಾ ಸಂಪತ್ತನ್ನು ನನ್ನ ಪ್ರೀತಿಗಾಗಿ  ವ್ಯಯಿಸಲು ಸಿದ್ಧ, ಆದರೆ ಸ್ವಾತಂತ್ರ್ಯಕ್ಕಾಗಿ ನಾನು ನನ್ನ ಪ್ರೀತಿಯನ್ನು ಬಲಿಕೊಡಲಿಕ್ಕೂ ಸಿದ್ಧ)

ಸಯ್ಯದ್ ಅಬ್ದುಲ್ ಹಯ್ ಅವರ  ಜೀವನಾನುಭವದ ಕೆಲವು ಮಾತುಗಳು ಗಮನಾರ್ಹವಾಗಿವೆ

ಜೀವನ ಎಂಬುದು ಒಂದು ಅತ್ಯಮೂಲ್ಯ ಅವಕಾಶ. ಅದರ ಒಂದು ಕ್ಷಣವನ್ನೂ ವ್ಯರ್ಥಗೊಳಿಸದೆ ಕ್ಷಣ ಕ್ಷಣವನ್ನೂ ಅತ್ಯುತ್ತಮವಾಗಿ ಬಳಸಿಕೊಳ್ಳಿ. ನಿಮ್ಮ ಬಳಿ ಸಮಯವಿದ್ದರೆ ಒಂದೋ ಏನನ್ನಾದರೂ ಕಲಿಯಲು ಬಳಸಿ ಅದಲ್ಲವಾದರೆ ನಿಮಗೆ ತಿಳಿದಿರುವುದನ್ನು ಇತರರಿಗೆ ಕಲಿಸಲು ಬಳಸಿ. 

ದುಡ್ಡು ಸಂಪತ್ತು ಇವುಗಳಿಗೆಲ್ಲಾ ಮಹತ್ವವಿದೆ. ಆದರೆ ದುಡ್ಡೇ ಸರ್ವಸ್ವವಲ್ಲ. ಇನ್ನೊಬ್ಬರಿಗೆ ನೆರವಾಗುವ ಮೂಲಕ ಸಿಗುವ ಸುಖ ಯಾವ ಸಂಪತ್ತಿನಿಂದಲೂ ಸಿಗುವುದಿಲ್ಲ. 

ಸುಮಾರು 60 ವರ್ಷಗಳಿಂದ ಖತರ್ ನಲ್ಲಿರುವ ಅಬ್ದುಲ್ ಹಯ್, ಒಬ್ಬರ ನಂತರ ಒಬ್ಬರಂತೆ ಖತರ್ ದೇಶವನ್ನು ಆಳಿದ 5 ಮಂದಿ ದೊರೆಗಳ ಆಡಳಿತವನ್ನು ಕಂಡಿದ್ದಾರೆ. ಅವರು ಖತರ್ ನಲ್ಲಿ ತಾವು ಕಳೆದ ದಿನಗಳನ್ನು ತಮ್ಮ ಡೈರಿಯಲ್ಲಿ ಟಿಪ್ಪಣಿಗಳ ರೂಪದಲ್ಲಿ ಬರೆದಿಟ್ಟಿದ್ದಾರೆ. ಮಾತ್ರವಲ್ಲ ಛಾಯಾ ಚಿತ್ರಗಳ ರೂಪದಲ್ಲೂ ದಾಖಲಿಸಿಟ್ಟಿದ್ದಾರೆ. ಅವರ ಬಳಿ ಕಳೆದ ಆರು ದಶಕಗಳಲ್ಲಿ ಕ್ಲಿಕ್ಕಿಸಲಾದ, ಖತರ್ ನ ವಿಭಿನ್ನ ಆಯಾಮಗಳ ದಾಖಲೆ ಎನ್ನಬಹುದಾದ 10 ಸಾವಿರಕ್ಕೂ ಅಧಿಕ ಫೋಟೋ ಗಳ ಒಂದು ಸಂಪನ್ನ ಸಂಗ್ರಹವಿದೆ. ಖತರ್ ದೇಶದ ಇಸ್ಲಾಮಿ ಸಂಸ್ಕೃತಿಯನ್ನು ಶ್ಲಾಘಿಸುವ ಎಲ್ಲರನ್ನು ಸಮಾನರಾಗಿ ಕಾಣುವ ಹಾಗೂ ಸಾಧ್ಯವಾದಷ್ಟು ಇನ್ನೊಬ್ಬರಿಗೆ ನೆರವಾಗುವ ಸಂಸ್ಕೃತಿಯನ್ನು ಎಲ್ಲೆಡೆ ಜನಪ್ರಿಯಗೊಳಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ.

ಅವರ ಪ್ರಕಾರ ಹಳೆಯ ಕಾಲದ ಖತರ್ ನ ಖ್ಯಾತ ಬಿಸ್ಮಿಲ್ಲಾ ಹೋಟೆಲ್ ನ ಮಾಲಕ ಹಾಜಿ ಹಂಝರ ಬದುಕು ಎಲ್ಲರಿಗೆ ಮಾದರಿಯಾಗಿದೆ. ಒಂದು ಹಂತದಲ್ಲಿ ಹಾಜಿ ಹಂಝ ಒಂದು ಕೈಯಲ್ಲಿ ಚಹಾದ ಪಾತ್ರೆ ಮತ್ತು ಇನ್ನೊಂದು ಕೈಯಲ್ಲಿ ಚಹಾವನ್ನು ಬಿಸಿಮಾಡುವ ಸ್ಟವ್ ಹಿಡಿದುಕೊಂಡು ಪೇಟೆಯಲ್ಲಿ ತಿರುಗಾಡುತ್ತ  ಚಹಾ ಮಾರುತ್ತಿದ್ದರು. ಮುಂದೆ ಅವರು ಸ್ವತಃ ಒಂದು ಊಟದ ಹೋಟೆಲನ್ನು  ಆರಂಭಿಸಿದರು. ಅವರ ಹೋಟೆಲಿನ ವಿಶೇಷವೇನೆಂದರೆ ಭಾರತದಿಂದ ಯಾರಾದರೂ ಉದ್ಯೋಗ ಅರಸಿಕೊಂಡು ಖತಾರ್ ಗೆ ಬಂದರೆ ಅವರಿಗೆ ಉದ್ಯೋಗ ಸಿಗುವ ತನಕ ಬಿಸ್ಮಿಲ್ಲಾ ಹೋಟೆಲಿನಲ್ಲಿ ಉಚಿತ ಊಟ ಸಿಗುತ್ತಿತ್ತು. ಉದ್ಯೋಗ ಸಿಕ್ಕಿದ ಬಳಿಕ ಮಾಸಿಕ ಕಂತುಗಳಲ್ಲಿ ಮರು ಪಾವತಿ ಮಾಡಬೇಕು ಎಂಬ ನಿಬಂಧನೆ ಇತ್ತು. ಇದರಿಂದ ನೂರಾರು ನಿರುದ್ಯೋಗಿಗಳಿಗೆ ಪ್ರಯೋಜನವಾಗಿತ್ತು.

ಅಬ್ದುಲ್ ಹಯ್ ಸಾಹೇಬರನ್ನು ಮಾತನಾಡಿಸಿದರೆ ಇಂತಹ ನೂರಾರು ಸ್ಫೂರ್ತಿದಾಯಕ ಕಥೆಗಳು ಅನಾವರಣ ಗೊಳ್ಳುತ್ತವೆ. ಪ್ರಕೃತಿ ಇರಲಿ, ಧರ್ಮವಿರಲಿ, ಸಾಹಿತ್ಯವಿರಲಿ ಸಂಸ್ಕೃತಿ ಇರಲಿ, ಇತಿಹಾಸವಿರಲಿ, ಯಾವುದೇ ವಿಷಯದಲ್ಲಿ ಅಬ್ದುಲ್ ಹಯ್ ಅವರನ್ನು ಮಾತನಾಡಿಸುವುದೆಂದರೆ, ವಿಶ್ವ ಕೋಶವನ್ನು ತೆರೆದಂತೆ. ಸ್ವಾರಸ್ಯಕರ ಮಾಹಿತಿಗಳ ಪ್ರವಾಹವೇ ಹರಿಯಲಾರಂಭಿಸುತ್ತದೆ.

Full View

Writer - ಎ. ಫೌಝಿಯ ಪುತ್ತಿಗೆ, ದೋಹಾ

contributor

Editor - ಎ. ಫೌಝಿಯ ಪುತ್ತಿಗೆ, ದೋಹಾ

contributor

Similar News