ಮೈದಾನದೊಳಗೆ ಇಶಾಂತ್-ಜಡೇಜ ಮಾತಿನ ಚಕಮಕಿ

Update: 2018-12-18 10:49 GMT

ಪರ್ತ್, ಡಿ.18: ಭಾರತದ ವೇಗದ ಬೌಲರ್ ಇಶಾಂತ್ ಶರ್ಮಾ ಹಾಗೂ ಬದಲಿ ಕ್ಷೇತ್ರರಕ್ಷಕನಾಗಿದ್ದ ರವೀಂದ್ರ ಜಡೇಜ ಆಸ್ಟ್ರೇಲಿಯ ವಿರುದ್ಧದ ಎರಡನೇ ಟೆಸ್ಟ್‌ನ ನಾಲ್ಕನೇ ದಿನದಾಟದಲ್ಲಿ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಭಾರತ 2ನೇ ಟೆಸ್ಟ್ ಪಂದ್ಯವನ್ನು 146 ರನ್‌ಗಳಿಂದ ಸೋತಿದೆ. ಇದೀಗ ಇಶಾಂತ್ ಹಾಗೂ ಜಡೇಜ ಮೈದಾನದಲ್ಲಿ ಪರಸ್ಪರ ವಾಗ್ವಾದ ನಡೆಸಿದ್ದ ವಿಡಿಯೋ ವೈರಲ್ ಆಗಿದೆ.

ಇಬ್ಬರು ವಾಗ್ವಾದದ ವೇಳೆ ಏನು ಮಾತನಾಡಿದ್ದರು ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಫೀಲ್ಡಿಂಗ್ ನಿಯೋಜನೆ ಬಗ್ಗೆ ಇಬ್ಬರೂ ಚರ್ಚಿಸುತ್ತಿದ್ದರು. ಜಡೇಜ ನಿರ್ದಿಷ್ಟ ಸ್ಥಳದಲ್ಲಿ ಫೀಲ್ಡರ್‌ರನ್ನು ನಿಯೋಜಿಸಲು ಬಯಸಿದ್ದರೆ, ಇದಕ್ಕೆ ಇಶಾಂತ್ ಅಸಮ್ಮತಿ ವ್ಯಕ್ತಪಡಿಸಿದ್ದರು.

ಸಣ್ಣ ಮಟ್ಟದಲ್ಲಿ ಆರಂಭವಾದ ಇವರಿಬ್ಬರ ಜಗಳ ಬಳಿಕ ತಾರಕಕ್ಕೇರಿತು. ಇಶಾಂತ್ ಅವರು ಜಡೇಜರತ್ತ ಬೆರಳು ಬೆಟ್ಟು ಮಾಡುತ್ತಿರುವುದು ಕಂಡುಬಂತು. ಆಗ ಕುಲ್‌ದೀಪ್ ಯಾದವ್ ಹಾಗೂ ಮುಹಮ್ಮದ್ ಶಮಿ ಇಬ್ಬರನ್ನು ಸಮಾಧಾನ ಮಾಡಿದರು.

 ಭಾರತ ಪರ್ತ್ ಟೆಸ್ಟ್‌ನಲ್ಲಿ ಸ್ಪಿನ್ನರ್‌ಗಳಿಗೆ ಆದ್ಯತೆ ನೀಡದೇ ಎಲ್ಲ ನಾಲ್ವರು ವೇಗಿಗಳನ್ನು ಕಣಕ್ಕಿಳಿಸಿತ್ತು. ಕೊಹ್ಲಿ ಪಡೆ ಈ ನಿರ್ಧಾರದಿಂದ ಕೈಸುಟ್ಟುಕೊಂಡಿದೆ. ಎದುರಾಳಿ ಆಸೀಸ್ ಸ್ಪಿನ್ನರ್ ಲಿಯೊನ್ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News