ರಾಜ್ಯದಲ್ಲಿ 276 ಪಬ್ಲಿಕ್ ಶಾಲೆಗಳ ಪ್ರಾರಂಭ: ಸಿಎಂ ಕುಮಾರಸ್ವಾಮಿ

Update: 2018-12-18 16:43 GMT

ಬೆಳಗಾವಿ, ಡಿ.18: ರಾಜ್ಯಾದ್ಯಂತ 276 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಡಾ ಉಮೇಶ ಜಿ. ಜಾಧವ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2017-18 ನೇ ಸಾಲಿನ ಆಯವ್ಯಯದಲ್ಲಿ ಗ್ರಾಮ ಪಂ. ಕೇಂದ್ರ ಸ್ಥಾನದಲ್ಲಿ 176 'ಕರ್ನಾಟಕ ಪಬ್ಲಿಕ್ ಶಾಲೆ'ಗಳನ್ನು ಮತ್ತು 2018-19 ನೇ ಸಾಲಿನಲ್ಲಿ ಆಯವ್ಯಯದಲ್ಲಿ 100 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ಘೋಷಿಸಲಾಗಿದೆ ಎಂದರು.

ಇಂತಹ ಶಾಲೆಗಳನ್ನು ಗುರುತಿಸಿ 1 ರಿಂದ 12 ನೇ ತರಗತಿವರೆಗೆ ಒಂದೇ ಸೂರಿನಡಿ, ಗುಣಮಟ್ಟದ ಶಿಕ್ಷಣ ಒದಗಿಸುವ ಚಿಂತನೆಯಿಂದ 2017-18ನೇ ಸಾಲಿನ ಆಯುವ್ಯಯ ಘೋಷಣೆಯಂತೆ ಪ್ರಾರಂಭಿಕವಾಗಿ 176 ‘ಕರ್ನಾಟಕ ಪಬ್ಲಿಕ್ ಶಾಲೆ’ ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಪ್ರಮುಖವಾಗಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಪ್ರಾರಂಭಿಸಲು ಸಂಯೋಜಿಸಲಾಗುವ ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿಗಳು ಒಂದೇ ಆವರಣದಲ್ಲಿರಬೇಕು ಅಥವಾ ಒಂದೇ ಹಳ್ಳಿಯ ವ್ಯಾಪ್ತಿಯಲ್ಲಿ ಇರುವಂತೆ ಯೋಜನೆ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮೊರಾರ್ಜಿ ದೇಸಾಯಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಏಕಲವ್ಯ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಇಂದಿರಾ ಗಾಂಧಿ ವಸತಿ ಶಾಲೆ ಮೊದಲಾದ ವಸತಿ ಶಾಲೆಗಳನ್ನು ನಡೆಸಲಾಗುತ್ತಿರುವುದರಿಂದ ರಾಜ್ಯದಲ್ಲಿರುವ ಆದರ್ಶ ವಿದ್ಯಾಲಯಗಳನ್ನು ವಸತಿ ಶಾಲೆಗಳನ್ನಾಗಿ ಪರಿವರ್ತಿಸುವ ಹಾಗೂ ಆರನೇ ತರಗತಿಯಿಂದ ಪದವಿ ಪೂರ್ವ ಕಾಲೇಜಿನವರೆಗೆ ವಿಸ್ತರಿಸುವ ಪ್ರಸ್ತಾವನೆ ಸರಕಾರದ ಮುಂದೆ ಸಧ್ಯಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಸದನಕ್ಕೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News