ಸಾರಿಗೆ ಬಸ್ ಪ್ರಮಾಣ ದರ ಶೀಘ್ರದಲ್ಲೆ ಹೆಚ್ಚಳ ಸಾಧ್ಯತೆ

Update: 2018-12-18 17:29 GMT

ಬೆಳಗಾವಿ, ಡಿ. 18: ಡೀಸೆಲ್ ಬೆಲೆ ಏರಿಕೆ ಮತ್ತು ಸಿಬ್ಬಂದಿಯ ತುಟ್ಟಿ ಭತ್ತೆ ಹೆಚ್ಚಳದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ತೀವ್ರ ಆರ್ಥಿಕ ಹೊರೆ ಬೀಳುತ್ತಿದ್ದು, ಬಸ್ ಪ್ರಮಾಣ ದರವನ್ನು ಏರಿಕೆ ಮಾಡಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಎಂ.ಕೆ. ಪ್ರಾಣೇಶ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, 2014ರಲ್ಲಿ ಸಾರ್ವಜನಿಕ ಬಸ್ ಪ್ರಯಾಣ ದರವನ್ನು ಶೇ.7.96ರಷ್ಟು ಹೆಚ್ಚಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಆ ಸಂದರ್ಭದಲ್ಲಿ ಡೀಸೆಲ್ ದರ ಕಡಿಮೆಯಾದ ಹಿನ್ನೆಲೆಯಲ್ಲಿ 2015ರಲ್ಲಿ ಪ್ರಯಾಣ ದರವನ್ನು ಶೇ.2ರಷ್ಟು ಇಳಿಸಲಾಗಿತ್ತು. ಆ ನಂತರ ಹಲವು ಬಾರಿ ಡೀಸೆಲ್ ದರ ಹೆಚ್ಚಿಸಿದ್ದರೂ, ಸಾರಿಗೆ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿರಲಿಲ್ಲ. ಇದೀಗ ಸಾರಿಗೆ ಸಂಸ್ಥೆಗಳಿಗೆ ಆಗುತ್ತಿರುವ ನಷ್ಟ ತಪ್ಪಿಸಲು ಪ್ರಯಾಣ ದರ ಹೆಚ್ಚಳಕ್ಕೆ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಾತ್ರೆ, ಹಬ್ಬ, ವಾರಾಂತ್ಯದಲ್ಲಿ ಪ್ರಸ್ತುತ ವಿಧಿಸುತ್ತಿರುವ ದರಕ್ಕಿಂತ ಎರಡು ಪಟ್ಟು ಹೆಚ್ಚಾಗದಂತೆ ದರ ವಿಧಿಸಲು ಅವಕಾಶವಿದೆ. ಆದರೆ, ಸಾರ್ವಜನಿಕ ಪ್ರಯಾಣಿಕರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಹೊರೆಯಾಗದಂತೆ ಪ್ರಮಾಣದ ದರ ಹೆಚ್ಚಳ ಮಾಡಲಾಗುತ್ತಿದೆ ಎಂದು ಡಿ.ಸಿ.ತಮ್ಮಣ್ಣ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News