ಡಿ.25 ರಿಂದ ಕುವೆಂಪು ನಾಟಕೋತ್ಸವ

Update: 2018-12-18 17:49 GMT

ಬೆಂಗಳೂರು, ಡಿ.18: ರಂಗಕಹಳೆ ತಂಡದ ವತಿಯಿಂದ 18ನೆ ಕುವೆಂಪು ನಾಟಕೋತ್ಸವವನ್ನು ಡಿ.25ರಿಂದ ಡಿ.29ರವರೆಗೂ ಕುಂದಾಪುರದ ಭಂಡಾರಕರ್ಸ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಪ್ರೊ.ದೊಡ್ಡರಂಗೇಗೌಡ, ನಾಡಿನ ಖ್ಯಾತ ಸಾಹಿತಿ, ಜ್ಞಾನಪೀಠ ಪುರಸ್ಕೃತ ಕುವೆಂಪು ಅವರ ಸಾಹಿತ್ಯವನ್ನು ಎಲ್ಲ ಕಡೆ ಪಸರಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಸಾಮಾಜಿಕ ವಿಜ್ಞಾನಿಯಾಗಿದ್ದರು. ಶೂದ್ರರನ್ನು ಕೆಳಮಟ್ಟದಲ್ಲಿ ನೋಡುತ್ತಿದ್ದಂತಹ ಕಾಲಘಟ್ಟದಲ್ಲಿ ಅವರನ್ನು ಮುಖ್ಯಭೂಮಿಕೆಗೆ ತರುವ ಪ್ರಯತ್ನವನ್ನು ತಮ್ಮ ನಾಟಕದ ಮೂಲಕ ಕುವೆಂಪು ಮಾಡಿದ್ದರು. ಅವರು ಸಾರ್ವಕಾಲಿಕ ಸತ್ಯ ಮತ್ತು ವೌಲ್ಯಗಳನ್ನು ತಿಳಿಸಿದ್ದಾರೆ ಎಂದರು.

ನ್ಯಾ. ಎ.ಜೆ ಸದಾಶಿವ ಮಾತನಾಡಿ, ನಾಡಗೀತೆಯನ್ನು ನೀಡಿದಂತಹ ಕುವೆಂಪು ನಾಡಿನ ಹೆಮ್ಮೆಯ ವ್ಯಕ್ತಿಯಾಗಿದ್ದಾರೆ. ಅವರ ನಾಟಕ, ಸಾಹಿತ್ಯದ ಮೂಲಕ ಮೂಢನಂಬಿಕೆ, ಜಾತೀಯತೆಯನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ಅವರ ನಾಟಕಗಳು ಮನಮುಟ್ಟುವಂತಿವೆ ಎಂದು ತಿಳಿಸಿದರು.

ಮನುಷ್ಯನ ಬದುಕಿನಲ್ಲಿ ನಾಟಕಗಳು ಅದ್ಭುತ ಪರಿಣಾಮ ಉಂಟು ಮಾಡುತ್ತದೆ. ನನ್ನ ಬದುಕು ಬೇರೆ ಬೇರೆ ರೂಪ ತಾಳಿ ನ್ಯಾಯಾಧೀಶನಾಗಲು ನಾಟಕಗಳೇ ಕಾರಣ. ನಾಟಕಗಳಲ್ಲಿ ಭಾಗವಹಿಸುತ್ತಿದ್ದರಿಂದಲೇ ವಕೀಲನಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ಸಂಗೀತ, ನಾಟಕ ಮುಂತಾದ ಕಲೆಗಳು ಮನುಷ್ಯನ ಮೇಲೆ ಅಗಾಧವಾದ ಪರಿಣಾಮ ಬೀರುತ್ತವೆ ಎಂದರು.

ನಾಟಕೋತ್ಸವವನ್ನು ಡಿ. 25 ರಂದು ಸಂಜೆ 6ಕ್ಕೆ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ. ಜಯಮಾಲ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ನಾಡೋಜ ಪ್ರೊ. ಹಂ.ಪಾ.ನಾಗರಾಜಯ್ಯ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಹಿತಿ ಮಾರ್ಕಂಡಪುರಂ ಶ್ರೀನಿವಾಸ್, ಭಂಡಾರಕರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರದರ್ಶನಗೊಳ್ಳುವ ನಾಟಕಗಳು: ಡಿ.25 ರಂದು ಸಿ. ಲಕ್ಷ್ಮಣ ನಿರ್ದೇಶನದ ಬೊಮ್ಮನಹಳ್ಳಿಯ ಕಿಂದರಿಜೋಗಿ, ಓಹಿಲೇಶ್ ಎಲ್. ನಿರ್ದೇಶನದ ಮೋಡಣ್ಣನ ತಮ್ಮ, ಡಿ.26 ರಂದು ಸಿ. ಲಕ್ಷ್ಮಣ ನಿರ್ದೇಶನದ ನನ್ನ ಗೋಪಾಲ, ಡಾ.ಕೆ.ರಾಮಕೃಷ್ಣಯ್ಯ ನಿರ್ದೇಶನದ ಜಲಗಾರ, ಡಿ. 27 ರಂದು ಟಿ.ಎಂ. ಬಾಲಕೃಷ್ಣ ನಿರ್ದೇಶನದ ಯಮನ ಸೋಲು, ಸಿ.ಲಕ್ಷ್ಮಣ ನಿರ್ದೇಶನದ ನನ್ನ ಗೋಪಾಲ ಪ್ರದರ್ಶನಗೊಳ್ಳಲಿವೆ.

ಡಿ.28 ರಂದು ಚಂದ್ರವೌಳೇಶ್ವರ ಕ್ರಿಯೇಷನ್ಸ್ ವತಿಯಿಂದ ಬಾಲಕ ಕುವೆಂಪು ಕಿರುಚಿತ್ರ ಪ್ರದರ್ಶನಗೊಳ್ಳಲಿದೆ. ಅದೇ ದಿನ ಸಂಜೆ 7.20 ಛಾಯಾ ಭಾರ್ಗವಿ ಎಸ್.ಎಚ್.ನಿರ್ದೇಶನದ ಶೂದ್ರತಪಸ್ವಿ ನಾಟಕ ಹಾಗೂ ಡಿ.29 ಮಾಲತೇಶ ಬಡಿಗೇರ ನಿರ್ದೇಶನದ ಸ್ಮಶಾನ ಕುರುಕ್ಷೇತ್ರ ಮತ್ತು ಮಂಜುನಾಥ ಎಲ್ ಬಡಿಗೇರ ನಿರ್ದೇಶನದ ದಶಾನನ ಸ್ವಪ್ನಸಿದ್ಧಿ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News