ಕಸ ಸಂಗ್ರಹಣೆಗಾಗಿ ‘ಕಸ ಕಿಯೋಸ್ಕ್’ ಘಟಕ ಉದ್ಘಾಟನೆ
ಬೆಂಗಳೂರು, ಡಿ.18: ಒಮೆಗಾ ಹೆಲ್ತ್ ಕೇರ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬಿಬಿಎಂಪಿ ಹಾಗೂ ಸಾಹಸ್ ಸಂಸ್ಥೆಯ ಸಹಯೋಗದೊಂದಿಗೆ ನಗರದಲ್ಲಿ ಕಸ ಸಂಗ್ರಹಣೆಗಾಗಿ ‘ಕಸ ಕಿಯೋಸ್ಕ್’ ಹೆಸರಿನಲ್ಲಿ ಘಟಕವನ್ನು ತೆರೆಯಲಾಗಿದೆ.
ನಗರದ ಮುರುಗೇಶ್ ಪಾಳ್ಯದ ಎನ್‌ಎಎಲ್ ಅಂಡ್ ಟನ್ನಲ್ ರಸ್ತೆಯಲ್ಲಿನ ವಾಯುಪಡೆ ಕ್ಯಾಂಪಸ್ ಬಳಿ ಕಿಯೋಸ್ಕ್ ಅನ್ನು ಪಾಲಿಕೆ ಸದಸ್ಯ ಎಂ.ಚಂದ್ರಪ್ಪರೆಡ್ಡಿ ಹಾಗೂ ಬಿಬಿಎಂಪಿ ಜಂಟಿ ಆಯುಕ್ತ ಜಿ.ಎಂ.ರವೀಂದ್ರ ಉದ್ಘಾಟಿಸಿದರು. ಸ್ವಯಂಸೇವಕರು ಒಣ ಕಸವನ್ನು ಸಂಗ್ರಹಿಸಿ ಕಿಯಾಸ್ಕ್‌ಗೆ ತಲುಪಿಸುವ ‘ಪ್ಲಾಗ್ ರನ್’ ಕಾರ್ಯಕ್ರಮವನ್ನು ಇದೇ ವೇಳೆ ನಡೆಸಲಾಯಿತು.
ಬೆಳಿಗ್ಗೆ 7ರಿಂದ 11 ಗಂಟೆ ಮತ್ತು ಸಂಜೆ 7ರಿಂದ ರಾತ್ರಿ 11ಗಂಟೆವರೆಗೆ ದಿನಕ್ಕೆ ಎರಡು ಪಾಳಿಗಳಲ್ಲಿ ಇಬ್ಬರು ವ್ಯಕ್ತಿಗಳು ಇದನ್ನು ನೋಡಿಕೊಳ್ಳುತ್ತಾರೆ. ಅವರವರ ಅನುಕೂಲಕ್ಕೆ ತಕ್ಕಂತೆ ವಿಂಗಡಿಸಲಾದ ತ್ಯಾಜ್ಯವನ್ನು ಜನರು ಹಾಕಬಹುದಾದ ಈ ಸೌಲಭ್ಯದ ಬಗ್ಗೆ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಒಣತ್ಯಾಜ್ಯವನ್ನು ಸಂಗ್ರಹಣಾ ಕೇಂದ್ರಕ್ಕೆ ಹಸ್ತಾಂತರಿಸಿದರೆ, ಹಸಿ ಮತ್ತು ಮನೆಗಳ ಅಪಾಯಕಾರಿ ತ್ಯಾಜ್ಯವನ್ನು ಪಾಲಿಕೆ ಸಂಗ್ರಹಿಸುತ್ತದೆ.
ಒಮೇಗಾ ಹೆಲ್ತ್ ಕೇರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಿ ನಟರಾಜನ್ ಮಾತನಾಡಿ, ಸಮಾಜಕ್ಕೆ ರಚನಾತ್ಮಕವಾಗಿ ಕೊಡುಗೆ ನೀಡಲು ನಮ್ಮ ಸಂಸ್ಥೆ ಮುಂದಾಗಿದ್ದು, ಅದರಲ್ಲಿ ಈ ಕಸ ಕಿಯೋಸ್ಕ್ ಒಂದಾಗಿದೆ. ನಮ್ಮ ಕೆಲಸದ ಸ್ಥಳವನ್ನು ಪರಿಸರ ಸ್ನೇಹಿಯಾಗಿ ಮಾಡಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ತ್ಯಾಜ್ಯ ಸಂಗ್ರಹಣಾ ಕಿಯೋಸ್ಕ್ ಕೇವಲ ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವುದು ಮಾತ್ರವಲ್ಲದೆ, ನಾಗರಿಕ ಸಹಕಾರದ ಮೂಲ ಸಮಸ್ಯೆಗಳನ್ನು ಕುರಿತು ಜನರಿಗೆ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಹೇಳಿದರು.