ಆ್ಯಂಬಿಡೆಂಟ್ ಪ್ರಕರಣ ಮುಚ್ಚಿಹಾಕಲು ರಾಜಕಾರಣಿಗಳಿಗೆ ಹಣ ನೀಡಿಕೆ: ಆರೋಪ

Update: 2018-12-18 17:56 GMT

ಬೆಂಗಳೂರು, ಡಿ.18: ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿ ಫರೀದ್ ಹಲವಾರು ರಾಜಕಾರಣಿಗಳಿಗೆ ಹಣ ನೀಡಿದ್ದಾರೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಆರೋಪಿಸಿದ್ದಾರೆ.

ನಗರದ ಆನಂದರಾವ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಅವರು, ಪ್ರಕರಣ ಮುಚ್ಚಿಹಾಕಲು ರಾಜಕಾರಣಿಗಳು ಹಣ ಪಡೆದಿದ್ದಾರೆ. ಫರೀದ್ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ 3 ಕೋಟಿ, ಹಾಲಿ ಸಚಿವ ಝಮೀರ್ ಅಹಮದ್ ಖಾನ್‌ಗೆ 20 ಕೋಟಿ, ರೋಷನ್ ಬೇಗ್‌ಗೆ 3 ಕೋಟಿ, ಮಾಜಿ ಶಾಸಕ ಪುಟ್ಟಣ್ಣ ಅವರಿಗೆ 1 ಕೋಟಿ, ಜನಾರ್ದನ ರೆಡ್ಡಿಗೆ 20 ಕೋಟಿ ರೂ. ಸೇರಿದಂತೆ 60 ಕೋಟಿ ರೂ. ನೀಡಿದ್ದಾನೆ ಎಂದು ಆಪಾದಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಕರಣದ ತನಿಖೆ ಹೋಗುತ್ತಿರುವ ದಿಕ್ಕನ್ನು ಗಮನಿಸಿದರೆ ನಂಬಲಾರ್ಹ ಮೂಲಗಳಿಂದ ಬಂದಿರುವ ಮಾಹಿತಿಯನ್ನು ಜನರ ಮುಂದಿಡುವ ಅನಿವಾರ್ಯತೆ ಬಂದಿದೆ. ಹೀಗಾಗಿ, ಪೊಲೀಸ್ ಅಧಿಕಾರಿಗಳ ಮೇಲೆ ಬಂಧಿರುವ ಆರೋಪಗಳ ಬಗ್ಗೆ ಗೃಹ ಇಲಾಖೆ ಮೊದಲು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪೊಲೀಸ್ ಇಲಾಖೆ ನಡೆಸುತ್ತಿರುವ ತನಿಖೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ನಿಲ್ಲಬೇಕು ಎಂದ ಅವರು, ರಾಜಕಾರಣಿಗಳು ಹಣ ಪಡೆದುಕೊಂಡಿರುವುದು ಸುಳ್ಳು ಎಂದಾದರೆ ಅವರು ಮಂಪರು ಪರೀಕ್ಷೆಗೆ ಒಳಗಾಗಲಿ ಎಂದು ಸವಾಲು ಹಾಕಿದರು. ಇದೇ ಸಂದರ್ಭದಲ್ಲಿ ಪ್ರಕರಣ ಭೇದಿಸಲು ಸಿಬಿಐಗೆ ಒಪ್ಪಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News