ತಾಯಂದಿರು-ಶಿಶುವಿನ ಮರಣ ಪ್ರಮಾಣ ತಗ್ಗಿಸಲು ಆರೋಗ್ಯ ಸಹಾಯಕಿಯರಿಗೆ ಟ್ಯಾಬ್ ವಿತರಣೆ

Update: 2018-12-18 18:04 GMT

ಬೆಂಗಳೂರು, ಡಿ. 18: ತಾಯಂದಿರು ಮತ್ತು ಶಿಶುವಿನ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ 7,737 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಅನುಸರಣಾ ವ್ಯವಸ್ಥೆಯಡಿ ಮಾಹಿತಿ ಸಂಗ್ರಹ, ಸಂರಕ್ಷಣೆ ಮತ್ತು ಸಂವಹನಕ್ಕಾಗಿ ಕಂಪ್ಯೂಟರ್ ಟ್ಯಾಬ್‌ಗಳನ್ನು ವಿತರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೀರ್ಮಾನಿಸಿದೆ.

ಎಲ್ಲ ಕಂಪ್ಯೂಟರ್ ಟ್ಯಾಬ್‌ಗಳಿಗೆ ಇಂಟರ್‌ನೆಟ್ ಅವಶ್ಯಕತೆ ಇರುವುದರಿಂದ ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಅಂತರ್ಜಾಲ ಸೌಲಭ್ಯ ಒದಗಿಸುತ್ತಿರುವ ಸಂಸ್ಥೆಗಳ ಸಿಮ್ ಕಾರ್ಡ್‌ಗಳನ್ನು ಖರೀದಿಸಲು ಅನುಮತಿ ನೀಡಿದೆ. ಇದಕ್ಕೆ ಬೇಕಿರುವ ಅನುದಾನವನ್ನು 2018-19ನೆ ಸಾಲಿನ ಆರ್‌ಓಪಿ ಲೆಕ್ಕಶೀರ್ಷಿಕೆಯಡಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಈ ಟ್ಯಾಬ್‌ಗಳನ್ನು ಉಪಯೋಗಿಸುವ ವಿಧಾನ, ಅಡ್ಡಿ, ತೊಡಕುಗಳ ನಿವಾರಣೆ ತಿಳಿಸಲು ಅರ್ಧದಿನದ ತರಬೇತಿಯನ್ನು ವಿಭಾಗವಾರು ಆಯೋಜಿಸಲಾಗುತ್ತಿದ್ದು, ಪ್ರತಿ ಜಿಲ್ಲೆಯ ಆರ್‌ಸಿಎಚ್‌ಓ, ಡಿಪಿಎಂ, ಬಿಪಿಎಂ, ಎಂ ಮತ್ತು ಇ ಮ್ಯಾನೇಜರ್‌ಗಳನ್ನು ನಿಯೋಜಿಸಲು ಸೂಚಿಸಲಾಗಿದೆ.

ಕಿರಿಯ ಮಹಿಳಾ ಆರೋಗ್ಯ ಸಹಾಯಕರ ಹುದ್ದೆ ಖಾಲಿ ಇದ್ದಲ್ಲಿ ಉಪ ಕೇಂದ್ರದ ಹೆಸರಿನ ಮುಂದೆ ಖಾಲಿ ಎಂದು ನಮೂದಿಸುವುದು. ಈ ಮಾಹಿತಿಯನ್ನು ಡಿ.19ರ ಮೊದಲು ನಿರ್ದೇಶನಾಲಯಕ್ಕೆ ಕಳುಹಿಸಲು ಕೊಡಬೇಕೆಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ.ರತನ್ ಕೇಲ್ಕರ್ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News