×
Ad

ಆನ್‌ಲೈನ್‌ನಲ್ಲಿ ಬೀಡಿ ಕಾರ್ಮಿಕರ ಪಿಎಫ್ ಅರ್ಜಿ: ಫೆಡರೇಷನ್ ವಿರೋಧ

Update: 2018-12-19 21:43 IST

ಉಡುಪಿ, ಡಿ.19: ಬಡ ಬೀಡಿ ಕಾರ್ಮಿಕರ ಪಿ.ಎಫ್.ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕೆಂಬ ಕೇಂದ್ರ ಸರಕಾರದ ಹೊಸ ಆದೇಶವನ್ನು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಷನ್ (ಸಿಐಟಿಯು) ವಿರೋಧಿಸಿದ್ದು, ಈ ಬಗ್ಗೆ ಉಡುಪಿ ಪಿಎಫ್ ಆಯುಕ್ತರಿಗೆ ಮನವಿ ಅರ್ಪಿಸಿ, ಆದೇಶವನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿದೆ.

ಅವಿದ್ಯಾವಂತರಾದ ಬಡ ಬೀಡಿ ಕಾರ್ಮಿಕರಿಗೆ ಪಿಎಫ್ ತೆಗೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈಗಿನ ಆದೇಶವನ್ನು ತಿದ್ದುಪಡಿ ಮಾಡಿ ಮೊದಲಿದ್ದ ಕ್ರಮದಲ್ಲೇ ಅರ್ಜಿಯನ್ನು ತೆಗೆದುಕೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈಗಾಗಲೇ ವರ್ಷಗಳ ವ್ಯತ್ಯಾಸದಿಂದ ಬೀಡಿ ಕಾರ್ಮಿಕರ ಬಹಳಷ್ಟು ಪಿಂಚಣಿ ಅರ್ಜಿ ವಿಲೇವಾರಿಗೆ ಬಾಕಿ ಇದೆ. ಇದಕ್ಕಾಗಿ ಶಾಲಾ ಸರ್ಟಿಫಿಕೇಟ್ ಕೇಳಲಾಗುತ್ತಿದೆ. ಬೀಡಿ ಕಾರ್ಮಿಕರಲ್ಲಿ ಅದು ಇಲ್ಲದ ಕಾರಣ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಿಂಚಣಿ ಅರ್ಜಿಯಲ್ಲಿ ವರ್ಷ ತಿದ್ದುಪಡಿಗೆ ಅವಕಾಶ, ಪಿಎಫ್ ಹಿಂದೆ ಪಡೆಯಲು ಅರ್ಜಿಯನ್ನು ಸರಳಗೊಳಿಸುವಂತೆ ಮನವಿಯಲ್ಲಿ ವಿನಂತಿಸಲಾಗಿದೆ. ಇದರೊಂದಿಗೆ ಪಿಂಚಣಿ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್‌ನ್ನು ಕಡ್ಡಾಯಗೊಳಿಸಬಾರದೆಂದೂ ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಸಿಐಟಿಯುನ ಉಡುಪಿ ಜಿಲ್ಲಾ ಕಾರ್ಯದರ್ಶಿ ಕೆ.ಶಂಕರ್, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬೀಡಿ ಫೆಡರೇಷನ್‌ನ ಅಧ್ಯಕ್ಷ ಮಹಾಬಲ ವಡೇರಹೋಬಳಿ, ಕಾರ್ಯದರ್ಶಿ ಉಮೇಶ ಕುಂದರ್, ನಳಿನಿ ಎಸ್. ಎಚ್.ವಿಠಲ ಪೂಜಾರಿ, ಬಲ್ಕೀಸ್ ಬಾನು ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News