ಹಳೇ ರೌಡಿಗಳಿಗೆ ಬಿಸಿ ಮುಟ್ಟಿಸಿದ ಸಿಸಿಬಿ: ಕೋಟ್ಯಂತರ ರೂ. ಮೌಲ್ಯದ ವಸ್ತು ಜಪ್ತಿ
ಬೆಂಗಳೂರು, ಡಿ.19: ಭೂಕಬಳಿಕೆ ಮತ್ತು ಅಕ್ರಮ ಹಣಕಾಸಿನ ವ್ಯವಹಾರ ತೊಡಗಿದ್ದ ಹಳೇ ರೌಡಿಗಳ ನಿವಾಸದ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಸಿಸಿಬಿ ತನಿಖಾಧಿಕಾರಿಗಳು, ಪಿಸ್ತೂಲು, ಏರ್‌ಗನ್ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ, ತನಿಖೆ ಮುಂದುವರೆಸಿದ್ದಾರೆ.
ಬುಧವಾರ ಬೆಳಗ್ಗೆ ಸಿಸಿಬಿ ತನಿಖಾಧಿಕಾರಿಗಳ ಎಂಟು ವಿಶೇಷ ತಂಡಗಳು, ನಗರದ ಪೂರ್ವ ಹಾಗೂ ಈಶಾನ್ಯ ವಿಭಾಗ ವ್ಯಾಪ್ತಿಯ ಯಲಹಂಕ, ಕೊಡಿಗೆಹಳ್ಳಿ, ಬೈಯಪ್ಪನಹಳ್ಳಿ, ಅಮತಹಳ್ಳಿ, ಬಾಗಲೂರು, ಕೆಜಿ ಹಳ್ಳಿ, ಬಾಣಸವಾಡಿ, ಡಿಜೆ ಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದರು.
ಹಳೇ ರೌಡಿಗಳಾದ ಸುನೀಲ್ ಯಾನೆ ಸೈಲೆಂಟ್ ಸುನೀಲ, ರೋಹಿತ್ ಯಾನೆ ಒಂಟೆ, ವೇಡಿಯಪ್ಪ, ಮಂಜುನಾಥ, ಭರತ್ ಯಾನೆ ಬಂಗಾರಿ, ನಾಗರಾಜ ಯಾನೆ ಬಾಕ್ಸರ್ ನಾಗ ಹಾಗೂ ಜಯಕುಮಾರ್ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಯಿತು ಎಂದು ನಗರದ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆಲೋಕ್ ಕುಮಾರ್ ತಿಳಿಸಿದರು.
ದಾಳಿ ವೇಳೆ ಭರತ್ ಎಂಬಾತನಿಂದ ಏರ್‌ಗನ್ ಹಾಗೂ ಬಾಕ್ಸರ್ ನಾಗ ಎಂಬಾತನಿಂದ ಪಿಸ್ತೂಲು ಜಪ್ತಿ ಮಾಡಲಾಗಿದೆ. ಜೊತೆಗೆ ಮಾರಕಾಸ್ತ್ರಗಳು, ಆಸ್ತಿ ಪತ್ರಗಳು ಸೇರಿದಂತೆ ಹಲವಾರು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿರುವ ಹಿನ್ನಲೆ ರೌಡಿಗಳ ಪರೇಡ್ ನಡೆಸಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಕೆಲವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಏಕಾಏಕಿ ಈ ದಾಳಿ ನಡೆದಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದರು.
18 ಗುಂಡು ಹಾರಿಸಿದ ರೌಡಿ?
6 ಜೀವಂತ ಗುಂಡು ಇರುವ ಪಿಸ್ತೂಲಿಗೆ ಪರವಾನಿಗೆ ಪಡೆದಿರುವ ರೌಡಿ ಬಾಕ್ಸರ್ ನಾಗ, 19 ಗುಂಡುಗಳನ್ನು ಹಾರಿಸಿದ್ದು, ಈ ಬಗ್ಗೆ ನಿಖರವಾಗಿ ಮಾಹಿತಿ ನೀಡುತ್ತಿಲ್ಲ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದರು.