×
Ad

ಮತ್ತೊಂದು ಮೈಲಿಗಲ್ಲು ಸಾಧಿಸಿದ ಎಚ್‌ಎಎಲ್

Update: 2018-12-19 22:41 IST

ಬೆಂಗಳೂರು, ಡಿ.19: ಹಿಂದುಸ್ತಾನ್ ಏರೊನಾಟಿಕ್ಸ್ ಲಿ.(ಎಚ್‌ಎಎಲ್) ನಿರ್ಮಿತ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್‌ಯುಎಚ್) ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ಡಿಸೆಂಬರ್ ತಿಂಗಳ ಆರಂಭದಲ್ಲಿ ಭೂ ಮಟ್ಟದಿಂದ 6 ಕಿ.ಮಿ. ಎತ್ತರದಲ್ಲಿ ಸ್ವದೇಶಿ ಎಲ್‌ಯುಎಚ್ ಯಶಸ್ವಿ ಹಾರಾಟ ನಡೆಸಿತ್ತು. ಈಗ ಎಲ್‌ಯುಎಚ್‌ನ 3ನೇ ಪ್ರಯೊಗ ಮಾದರಿ ಪಿಟಿ3ಯನ್ನು (ಪ್ರೋಟೊಟೈಪ್) ಟೆಸ್ಟ್ ಪೈಲಟ್ ನಿವೃತ್ತ ವಿಂಗ್ ಕಮಾಂಡರ್ ಅನಿಲ್ ಭಂಭನಿ ಮತ್ತು ನಿವೃತ್ತ ತಂಡದ ನಾಯಕ ಎಂ.ಆರ್. ಆನಂದ್ ಯಶಸ್ವಿ ಹಾರಾಟ ನಡೆಸಿದ್ದಾರೆ.

ಪಿಟಿ3 ಹಾರಾಟ ಯಶಸ್ಸಿನ ಹಿನ್ನೆಲೆಯಲ್ಲಿ ಸೇನೆಗಾಗಿ ಕಾಪ್ಟರ್ ಉತ್ಪಾದನೆಗೆ ಶೀಘ್ರ ಒಪ್ಪಿಗೆ ದೊರೆಯಲಿದೆ ಎಂದು ಎಚ್‌ಎಎಲ್ ಸಿಎಂಡಿ ಆರ್.ಮಾಧವನ್ ತಿಳಿಸಿದ್ದಾರೆ. 3ನೇ ಪ್ರೋಟೊಟೈಪ್ ಯಶಸ್ವಿ ಹಾರಾಟದ ಮೂಲಕ ಹೊಸ ಮೈಲಿಗಲ್ಲು ಸಾಧಿಸಲಾಗಿದ್ದು, ಎಲ್‌ಯುಎಚ್ ಪ್ರಸ್ತುತ ಐಎಎಫ್ ಬಳಿ ಇರುವ ಚೀತಾ ಮತ್ತು ಚೇತಕ್ ಯುದ್ಧ ಹೆಲಿಕಾಪ್ಟರ್‌ಗಳ ಸ್ಥಾನ ತುಂಬಲಿದೆ ಎಂದು ಇಂಜಿನಿಯರಿಂಗ್ ಸಂಶೊಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಅರೂಪ್ ಚಟರ್ಜಿ ತಿಳಿಸಿದ್ದಾರೆ.

ಕಾರ್ಯಾದೇಶ: ಎಚ್‌ಎಎಲ್ ರೋಟರಿ ವಿಂಗ್ ಸಂಶೊಧನೆ ಮತ್ತು ಅಭಿವೃದ್ಧಿ ಕೇಂದ್ರ 3 ಟನ್ ತೂಕದ ನ್ಯೂ ಜನರೇಷನ್ ಎಲ್‌ಯುಎಚ್ ಹೆಲಿಕಾಪ್ಟರ್ ವಿನ್ಯಾಸಗೊಳಿಸಿ, ಉತ್ಪಾದಿಸಿದೆ. 2016ರ ಸೆ.6ರಂದು ಮೊದಲ ಎಲ್‌ಯುಎಚ್ ಪಿಟಿ1 ಹಾರಾಟ ನಡೆಸಿತ್ತು. 2017ರ ಮೆ 22ರಂದು ಎರಡನೇ ಪ್ರೋಟೊಟೈಪ್ ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಜನವರಿಯಲ್ಲಿ ಎಲ್‌ಯುಎಚ್ ಹೈ ಆಲ್ಟಿಟ್ಯೂಡ್ ಕೊಲ್ಡ್ ವೆದರ್ ಪರೀಕ್ಷೆಗೊಳಪಡಲಿದೆ. ಭಾರತೀಯ ಸೇನೆ 126 ಹಾಗೂ ವಾಯುಸೇನೆ 61 ಎಲ್‌ಯುಎಚ್ ಖರೀದಿಗೆ ಎಚ್‌ಎಎಲ್‌ಗೆ ಕಾರ್ಯಾದೇಶ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News