ಮೆಟ್ರೋ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ: ಸದಾಖತ್ ಪಾಷಾ

Update: 2018-12-19 17:34 GMT

ಬೆಂಗಳೂರು, ಡಿ.19: ಮೆಟ್ರೋ ಕಾಮಗಾರಿಗೆ ಆರಂಭದ ದಿನಗಳಲ್ಲಿ ಫಿಲ್ಟರ್ ಮರಳು ಬಳಕೆ ಮಾಡಿದ್ದರಿಂದ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಕರ್ನಾಟಕ ದಲಿತ ಮತ್ತು ಮೈನಾರಿಟೀಸ್ ಸೇನೆಯ ಮುಖಂಡ ಸದಾಖತ್ ಪಾಷಾ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಟ್ರೋ ಕಾಮಗಾರಿಯ ಆರಂಭದಿಂದಲೂ ಕಾಮಗಾರಿಯ ಸ್ಥಳಕ್ಕೆ ರಾತ್ರಿಯ ವೇಳೆಯಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಕಾಮಗಾರಿಗೆ ರಾಮನಗರದ ಹಾಗೂ ದೇವನಹಳ್ಳಿಯ ಫಿಲ್ಟರ್ ಮರಳನ್ನು ಬಳಸಿದ್ದಾರೆ. ಇದರಿಂದಾಗಿ ಮೆಟ್ರೋ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಹಜವಾಗಿಯೇ ಅನುಮಾನ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ಕಟ್ಟಡ ನಿರ್ಮಾಣದ ವೇಳೆ ಗುತ್ತಿಗೆದಾರರು ಹಾಗೂ ಕಾರ್ಮಿಕರು ಸಿಮೆಂಟ್, ಸ್ಟೀಲ್‌ನಂತಹ ಸಾಮಗ್ರಿಗಳನ್ನು ಮಾರಿಕೊಳ್ಳುತ್ತಿದ್ದಾರೆ. ಕಳಪೆ ಕಾಮಗಾರಿ ಜೊತೆಯಲ್ಲೇ, ಅವ್ಯವಹಾರ ನಡೆಯುತ್ತಿದೆ ಎಂದು ಮೇ 2012ರಲ್ಲಿಯೇ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೆ. ಆದರೆ, ದೂರು ದಾಖಲಿಸಿದ 11 ತಿಂಗಳ ನಂತರ ಈ ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಲೋಕಾಯುಕ್ತ ಹಿಂದೆ ಸರಿಯಿತು ಎಂದರು.

ಆನಂತರ ಮಾಹಿತಿ ಹಕ್ಕುಗಳ ಮೂಲಕ ಕಾಮಗಾರಿ ಗುಣಮಟ್ಟ ಕುರಿತು ದೃಢೀಕರಣ ಮಾಹಿತಿ ಕೇಳಿದ್ದೆ. ಈ ಮಾಹಿತಿಯನ್ನು ಸೂಕ್ತ ಸಮಯಕ್ಕೆ ಬಿಎಂಆರ್‌ಸಿಎಲ್ ಒದಗಿಸಲಿಲ್ಲ. ಅಂದು ನಾನು ಲೋಕಾಯುಕ್ತಾಗೆ ದೂರು ನೀಡಿದಾಗ ಪ್ರಾಮಾಣಿಕ ತನಿಖೆ ನಡೆದಿದ್ದರೆ 30-40 ವರ್ಷ ಬಾಳ ಬೇಕಾದ ಕಾಮಗಾರಿಯಲ್ಲಿ 5 ವರ್ಷದೊಳಗೇ ಸಮಸ್ಯೆ ಬರುತ್ತಿರಲಿಲ್ಲ ಎಂದು ಅಸಮಾಧಾನಪಟ್ಟರು.

ಸೂಕ್ತ ವ್ಯವಸ್ಥೆ ಇಲ್ಲ: ಮೆಟ್ರೋ ಒಂದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದ್ದರೂ ಬಿಎಂಆರ್‌ಸಿಎಲ್ (ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ) ಜನಸಾಮಾನ್ಯರಿಗೆ ತನ್ನ ಚಟುವಟಿಕೆಗಳ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ಮೆಟ್ರೋ ಪ್ರಯಾಣಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ಆ ನಿಟ್ಟಿನಲ್ಲಿ ನಿಗದಿತವಾಗಿ ಮಾಸಿಕ ಸಭೆ ಕರೆದು ಸಾರ್ವಜನಿಕರಿಗೆ ಮೆಟ್ರೋ ಸೌಲಭ್ಯಗಳು, ಹೊಸ ಕಾಮಗಾರಿಗಳು ಆ ಕುರಿತು ಆಕ್ಷೇಪಗಳು, ಕಾಮಗಾರಿಯ ಗೊಂದಲಗಳ ಕುರಿತು ಸ್ಪಷ್ಟನೆ ನೀಡುತ್ತಿರಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಮುಖ್ಯಮಂತ್ರಿಗಳು ಮೆಟ್ರೋ ಹೊಸ ಕಾಮಗಾರಿ ಹಾಗೂ ದುರಸ್ಥಿ ಕಾಮಗಾರಿಯ ಗುಣಮಟ್ಟ ಪರಿಶೀಲನೆಗೆ ಸರಕಾರಿ ಇಂಜಿನಿಯರ್‌ಗಳನ್ನು ನೇಮಿಸಬೇಕು. ಕಾಮಗಾರಿ ಬಳಸುವ ಕಟ್ಟಡ ನಿರ್ಮಾಣ ವಸ್ತುಗಳ ಗುಣಮಟ್ಟ ಕುರಿತು ದೃಢೀಕರಣ ಪತ್ರ ಪಡೆಯಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News