​ಪುತ್ರಿಯ ಅತ್ಯಾಚಾರ ಎಸಗಿದ ಆರೋಪಿ ತಂದೆಗೆ ಸತ್ತ ಬಳಿಕ ಸಿಕ್ಕ ನ್ಯಾಯ!

Update: 2018-12-20 04:19 GMT

ಹೊಸದಿಲ್ಲಿ, ಡಿ.20: "ನಾನು ನಿರ್ದೋಷಿ; ವಿಚಾರಣಾ ನ್ಯಾಯಾಲಯದ ದೋಷಪೂರ್ಣ ದೃಷ್ಟಿಕೋನದಿಂದಾಗಿ ನನಗೆ ಶಿಕ್ಷೆಯಾಗಿದೆ" ಎಂದು ಮೊದಲ ದಿನದಿಂದಲೂ ಪ್ರತಿಪಾದಿಸುತ್ತಾ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೊನೆಗೂ ನ್ಯಾಯ ಸಿಕ್ಕಿದೆ; ಆದರೆ ಆ ವ್ಯಕ್ತಿ ಮೃತಪಟ್ಟ 10 ತಿಂಗಳ ಬಳಿಕ!

ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯನ್ನು ನಿರ್ದೋಷಿ ಎಂದು ಘಟನೆ ನಡೆದ ಹದಿನೇಳು ವರ್ಷಗಳ ಬಳಿಕ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಇದಕ್ಕೂ ಮುನ್ನ ವಿಚಾರಣಾ ನ್ಯಾಯಾಲಯ, ಆರೋಪಿಗೆ 10 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು.

ಪುತ್ರಿ ನೀಡಿದ ದೂರಿನ ಬಗ್ಗೆ ನ್ಯಾಯಬದ್ಧ ತನಿಖೆ ಅಥವಾ ವಿಚಾರಣೆ ನಡೆದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. "ಆರೋಪಿ ಮೊದಲ ದಿನದಿಂದಲೂ ತಾನು ಅಮಾಯಕ ಎಂದು ಹೇಳಿಕೊಂಡೇ ಬಂದಿದ್ದ. ಒಬ್ಬ ಹುಡುಗ ಪುತ್ರಿಯನ್ನು ಅಪಹರಿಸಿ ಕೆಡಿಸಿದ್ದ. 1996ರ ಜನವರಿಯಲ್ಲಿ ಪುತ್ರಿ ಅತ್ಯಾಚಾರದ ದೂರು ನೀಡಿದಾಗ ಆಕೆ ಗರ್ಭಿಣಿಯಾಗಿದ್ದಳು ಎಂದು ಹೇಳಿದ್ದ. ಆದರೆ ತನಿಖಾ ಏಜೆನ್ಸಿ ಅಥವಾ ವಿಚಾರಣಾ ನ್ಯಾಯಾಲಯ ಆತನ ಅಭಿಪ್ರಾಯವನ್ನು ಮನ್ನಿಸಲೇ ಇಲ್ಲ" ಎಂದು ನ್ಯಾಯಮೂರ್ತಿ ಆರ್.ಕೆ.ಗೌಬಾ ಹೇಳಿದ್ದಾರೆ.

ಅಪಹರಿಸಿದ್ದ ಎನ್ನಲಾದ ಬಾಲಕನ ಡಿಎನ್‌ಎ ಮಾದರಿ ಪಡೆದು ಅದನ್ನು ಹಾಗೂ ಭ್ರೂಣದ ಡಿಎನ್‌ಎ ಪರೀಕ್ಷಿಸಬೇಕು ಎಂದು ಆರೋಪಿ ತಂದೆ ಕೋರಿದ್ದರು. ಆದರೆ ಇದಕ್ಕೆ ಪೊಲೀಸರು ಒಪ್ಪಿಗೆ ನೀಡಲಿಲ್ಲ ಹಾಗೂ ವಿಚಾರಣಾ ನ್ಯಾಯಾಲಯ ಕೂಡಾ ಈ ಸಂಬಂಧ ಸೂಚನೆ ನೀಡಲಿಲ್ಲ ಎಂದು ತೀರ್ಪಿನಲ್ಲಿ ವಿವರಿಸಿದ್ದಾರೆ.

"ಈ ತನಿಖೆ ಏಕಪಕ್ಷೀಯವಾಗಿದ್ದು, ಇಷ್ಟು ಸುದೀರ್ಘ ಅವಧಿಯ ಬಳಿಕ ನ್ಯಾಯಾಲಯ ಸಂಬಂಧಪಟ್ಟ ಎಲ್ಲರ ನಿಷ್ಕ್ರಿಯತೆಯನ್ನಷ್ಟೇ ಹೇಳಲು ಸಾಧ್ಯ. ಇಷ್ಟು ಮಾತ್ರವಲ್ಲದೇ ತನಿಖಾ ಏಜೆನ್ಸಿಯಾಗಲೀ, ವಿಚಾರಣಾ ನ್ಯಾಯಾಲಯವಾಗಲೀ, ಯಾವುದೇ ಹಂತದಲ್ಲಿ ಅರ್ಜಿದಾರನಿಗೆ ನ್ಯಾಯ ಒದಗಿಸಿಲ್ಲ" ಎಂದು ಹೇಳಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಆರೋಪಿ ತಂದೆ ಮೃತಪಟ್ಟಿದ್ದು, ಆತನನ್ನು ದೋಷಮುಕ್ತಗೊಳಿಸಿ ಹೈಕೋರ್ಟ್ ತೀರ್ಪು ನೀಡಿದೆ. ಆರೋಪಿ ಮೃತಪಟ್ಟ ಬಳಿಕ ಆತನ ಪತ್ನಿ ಮೇಲ್ಮನವಿಯನ್ನು ಮುಂದುವರಿಸಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News