×
Ad

ಇಬ್ಬರು ಕಳವು ಆರೋಪಿಗಳ ಬಂಧನ: 10 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ

Update: 2018-12-20 20:11 IST

ಬೆಂಗಳೂರು, ಡಿ.20: ಕನ್ನ ಕಳವು ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿರುವ ವೈಟ್‌ಫೀಲ್ಡ್ ವಿಭಾಗದ ಎಚ್‌ಎಎಲ್ ಠಾಣಾ ಪೊಲೀಸರು, 10 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಾಜಿನಗರ ಮಕ್ಕಾನ್ ರಸ್ತೆಯ ವೇಲು(43) ಹಾಗೂ ಇಸ್ಲಾಂಪುರ ನಿವಾಸಿ ಶಬ್ಬೀರ್(30) ಎಂಬುವರು ಬಂಧಿತ ಆರೋಪಿಗಳೆಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಇತ್ತೀಚಿಗೆ ಮನೆ ಕಳ್ಳತನ ಪ್ರಕರಣ ಸಂಬಂಧ ಎಚ್‌ಎಎಲ್ ಠಾಣಾ ಎಸ್ಸೈ ಚಂದ್ರದರ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ನಡೆಸಿದಾಗ ಆರೋಪಿಗಳಿಬ್ಬರು ಸಿಕ್ಕಿ ಬಿದ್ದಿದ್ದು, ಇವರ ವಶದಲ್ಲಿದ್ದ 10 ಲಕ್ಷ ರೂ. ಮೌಲ್ಯದ 230 ಗ್ರಾಂ ಚಿನ್ನಾಭರಣ, 9 ಎಲ್‌ಇಡಿ ಟಿವಿ ಹಾಗೂ ಕ್ಯಾಮೆರಾ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ಇಬ್ಬರ ಬಂಧನದಿಂದ ಎಚ್‌ಎಎಲ್ ಪೊಲೀಸ್ ಠಾಣೆಯ 6 ಸೇರಿದಂತೆ ಒಟ್ಟು 8 ಪ್ರಕರಣಗಳು ಪತ್ತೆಯಾಗಿದ್ದು, ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಮಾಲಕರಿಗೆ ವಾಪಸ್ಸು ನೀಡಲಾಯಿತು. ಇನ್ನೂ, ಈ ಪ್ರಕರಣದ ಪ್ರಮುಖ ಆರೋಪಿ ವೇಲು ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ 80ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಹದ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News