ಎನ್‌ಡಿಆರ್‌ಎಫ್ ಮಾನದಂಡಗಳಿಗೆ ತಿದ್ದುಪಡಿ ತನ್ನಿ: ಕೇಂದ್ರ ಸಚಿವರಿಗೆ ಆರ್.ವಿ.ದೇಶಪಾಂಡೆ ಪತ್ರ

Update: 2018-12-20 15:41 GMT

ಬೆಂಗಳೂರು, ಡಿ. 20: ಸಾಧಾರಣ ಪ್ರಮಾಣದಲ್ಲಿ ಬರ ಪೀಡಿತವಾಗಿರುವ ತಾಲೂಕುಗಳ ರೈತರಿಗೂ ಎನ್‌ಡಿಆರ್‌ಎಫ್‌ನಿಂದ ಪರಿಹಾರ ದೊರಕುವಂತೆ 2016ರ ಬರ ನಿರ್ವಹಣೆ ಕೈಪಿಡಿಗೆ ತಿದ್ದುಪಡಿ ತರಬೇಕೆಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. 

ಈ ಕುರಿತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ರಾಧಾಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವ ಅವರು, ಎನ್‌ಡಿಆರ್‌ಎಫ್‌ನ ಈಗಿನ ಮಾನದಂಡಗಳ ಪ್ರಕಾರ ತೀವ್ರ ಬರಗಾಲ ಪೀಡಿತವಾಗಿದ್ದು, ಶೇ.50 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದ ಬೆಳೆ ನಷ್ಟವಾಗಿರುವ ತಾಲೂಕುಗಳಿಗೆ ಮಾತ್ರ ಆರ್ಥಿಕ ನೆರವು ಸಿಗಲಿದೆ. ಇದರಿಂದಾಗಿ, ಸಾಧಾರಣ ಬರ ಪೀಡಿತ ತಾಲೂಕಾಗಿದ್ದು, ಶೇ.33ರಿಂದ 50ರ ವರೆಗೆ ಬೆಳೆ ನಷ್ಟವಾಗಿರುವ ಪ್ರದೇಶಗಳ ರೈತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ. ಕೃಷಿಕರು ಸಂಕಷ್ಟದಲ್ಲಿದ್ದು, ಕೃಷಿ ಮುಂದುವರಿಸಿಕೊಂಡು ಹೋಗುವುದೇ ದುಸ್ತರವಾಗಿದೆ. ಹೀಗಾಗಿ, ಸಾಧಾರಣ ಬರ ಪೀಡಿತ ತಾಲೂಕುಗಳ ರೈತರನ್ನು ಪರಿಹಾರಕ್ಕೆ ಪರಿಗಣಿಸಬೇಕು. ಇಂತಹ ಕ್ರಮದಿಂದ ದೇಶದಾದ್ಯಂತ ಇರುವ ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದು ದೇಶಪಾಂಡೆ ಪ್ರತಿಪಾದಿಸಿದ್ದಾರೆ.

ಅಲ್ಲದೆ, ಶೇ.50ಕ್ಕಿಂತ ಕಡಿಮೆ ಬೆಳೆ ನಷ್ಟ ಅನುಭವಿಸಿರುವ ರೈತರನ್ನು ಪರಿಹಾರಕ್ಕೆ ಪರಿಗಣಿಸದಿರುವುದು ಇದೀಗ ಚಾಲ್ತಿಯಲ್ಲಿರುವ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ನಿಯಮಗಳಿಗೆ ತದ್ವಿರುದ್ಧವಾಗಿದೆ. ಏಕೆಂದರೆ, ಶೇ.33ರಿಂದ ಶೇ.50ರಷ್ಟು ಬೆಳೆ ನಷ್ಟ ಅನುಭವಿಸಿರುವವರಿಗೆ ಇನ್‌ಪುಟ್ ಸಬ್ಸಿಡಿ ಕೊಡಬೇಕೆಂಬ ಅಂಶವು ಎನ್‌ಡಿಆರ್‌ಎಫ್ ಮಾನದಂಡಗಳಲ್ಲಿ ಇದೆ ಎಂದು ದೇಶಪಾಂಡೆ, ಪತ್ರದ ಮೂಲಕ ಕೇಂದ್ರ ಸಚಿವರ ಗಮನ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News