×
Ad

ಸಚಿವ ಸಂಪುಟ ವಿಸ್ತರಣೆ: ದಿಲ್ಲಿಗೆ ತೆರಳಲಿರುವ ಮುಖಂಡರು

Update: 2018-12-20 21:24 IST

ಬೆಂಗಳೂರು, ಡಿ. 20: ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್‌ನೊಂದಿಗೆ ಚರ್ಚಿಸಲು ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. 

ಗುರುವಾರ ವಿಶೇಷ ವಿಮಾನದ ಮೂಲಕ ದಿಲ್ಲಿಗೆ ತೆರಳಲಿರುವ ಮುಖಂಡರು, ಸಚಿವ ಸಂಪುಟದಲ್ಲಿ ಖಾಲಿ ಇರುವ 6 ಸ್ಥಾನಗಳ ಭರ್ತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜತೆ ಚರ್ಚಿಸಲಿದ್ದಾರೆ. ನಾಳೆ(ಡಿ.21) ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ, ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆಂದು ಹೇಳಲಾಗಿದೆ.

ಡಿ.22ರ ಸಂಜೆ 5ಗಂಟೆ ಸುಮಾರಿಗೆ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಖಚಿತಪಡಿಸಿದ್ದಾರೆ. ಆದರೆ, ‘ಸಂಪುಟ ವಿಸ್ತರಣೆಯೋ ಅಥವಾ ಪುನರ್‌ರಚನೆಯೋ’ ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ಸಚಿವ ಸ್ಥಾನಾಕಾಂಕ್ಷಿ ಶಾಸಕರ ಭಾರೀ ಲಾಬಿ ಆರಂಭವಾಗಿದೆ.

ಸಚಿವ ಸ್ಥಾನಕ್ಕಾಗಿ ಜಾತಿ, ಜಿಲ್ಲೆ, ಪ್ರಾದೇಶಿಕ ಪ್ರಾತಿನಿಧ್ಯದ ಚರ್ಚೆ ನಡೆಯುತ್ತಿದೆ. ಜತೆಗೆ ಹಿರಿಯ-ಕಿರಿಯ ಶಾಸಕರ ನಡುವೆ ಭಾರೀ ಪೈಪೋಟಿಯೂ ನಡೆಯುತ್ತಿದ್ದು, ಅಂತಿಮವಾಗಿ ಹೈಕಮಾಂಡ್ ಒಲವು ಯಾರಿಗೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News