ರಫೇಲ್ ಹಗರಣ: ಜೆಪಿಸಿ ತನಿಖೆಗೆ ಪಿ.ಚಿದಂಬರಂ ಆಗ್ರಹ

Update: 2018-12-21 12:57 GMT

ಬೆಂಗಳೂರು, ಡಿ.21: ರಫೇಲ್ ಯುದ್ಧ ವಿಮಾನಗಳ ಖರೀದಿ ಹಗರಣ ಆರೋಪ ಪ್ರಕರಣ ಸಂಬಂಧ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆ ನಡೆಸಬೇಕು ಎಂದು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಆಗ್ರಹಿಸಿದರು.

ಶುಕ್ರವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಲೇ ಸಂಸತ್ತಿನಲ್ಲಿ ಈ ಹಗರಣ ಸಂಬಂಧ ಚರ್ಚೆ ನಡೆದಿದ್ದು, ತನಿಖೆಗೆ ಕಾಂಗ್ರೆಸ್ ಒತ್ತಾಯ ಮಾಡಿದೆ. ಆದರೆ, ಆಡಳಿತ ಪಕ್ಷ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

2012ರ ಡಿ.12ರಂದು 526.10 ಕೋಟಿ ರೂ.ಗಳಿಗೆ ಆಗಿನ ಯುಪಿಎ ಸರಕಾರ ಮತ್ತು ಫ್ರಾನ್ಸ್ ನಡುವೆ 126 ರಫೇಲ್ ಫೈಟರ್ ಜೆಟ್‌ಗಳನ್ನು ಖರೀದಿಸಲು ಒಪ್ಪಂದವಾಗಿತ್ತು. 18 ವಿಮಾನಗಳು ಫ್ರಾನ್ಸ್‌ನಿಂದ ನೇರವಾಗಿ ಭಾರತಕ್ಕೆ ರವಾನಿಸುವ ಹಾಗೂ ಉಳಿದ 108 ವಿಮಾನಗಳನ್ನು ಎಚ್‌ಎಎಲ್‌ನಲ್ಲಿ ತಯಾರಿಸುವ ಒಡಂಬಡಿಕೆಯಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ 2015ನೆ ಸಾಲಿನಲ್ಲಿ ಫ್ರಾನ್ಸ್ ಜೊತೆ ಹೊಸ ಒಪ್ಪಂದಕ್ಕೆ ಸಹಿ ಮಾಡಿದರು. ಹಿಂದಿನ ಒಪ್ಪಂದವನ್ನು ರದ್ದುಪಡಿಸಿ ಹೊಸ ಒಡಂಬಡಿಕೆಗೆ ನಿರ್ಧಾರ ಕೈಗೊಳ್ಳುವ ಅಗತ್ಯ ಇತ್ತೇ ಎಂದು ಅವರು ಪ್ರಶ್ನೆ ಮಾಡಿದರು.

ದೇಶದ ವಾಯುಪಡೆಗೆ 126 ವಿಮಾನಗಳ ಅಗತ್ಯವಿರುವಾಗ ಕೇಂದ್ರ ಸರಕಾರ ಕೇವಲ 36 ವಿಮಾನಗಳನ್ನು ಏಕೆ ಖರೀದಿಸಲು ನಿರ್ಧರಿಸಿತು. ಅದೇ ರೀತಿ, ಹೊಸ ಒಪ್ಪಂದದಡಿ ಪ್ರತಿ ವಿಮಾನದ ದರವು 1,670 ಕೋಟಿ ರೂ.ಗಳು ಎಂಬುದು ನಿಜವಾದರೆ ಮೂರು ಪಟ್ಟು ಬೆಲೆ ಹೆಚ್ಚಳಕ್ಕೆ ಸಮರ್ಥನೆ ಇದೆಯೇ ಎಂದು ಹೇಳಿದರು.

ಮುಖ್ಯಸ್ಥರು ಸುಮ್ಮನೆ ಇರಲಿ: ವೈಯಕ್ತಿಕವಾಗಿ ಸೇನಾ ಮುಖ್ಯಸ್ಥರಿಗೆ ಅಪಾರ ಗೌರವ ನೀಡುತ್ತೇನೆ. ಆದರೆ, ಸೇನಾ ಮುಖ್ಯಸ್ಥರು, ಈ ಚರ್ಚೆಯಿಂದ ದೂರ ಉಳಿಯಬೇಕು. ಅಲ್ಲದೆ, ನಾವು ರಫೇಲ್ ಕೆಟ್ಟ ವಿಮಾನ ಎಂದು ಹೇಳುತ್ತಿಲ್ಲ. 126 ವಿಮಾನಗಳ ಅಗತ್ಯವಿದ್ದಾಗ 36 ವಿಮಾನಗಳನ್ನು ಮಾತ್ರ ಏಕೆ ಖರೀದಿ ಮಾಡಿದ್ದು, ಎಂದು ವಾಯು ಪಡೆ ಮುಖ್ಯಸ್ಥರು ಪ್ರಶ್ನಿಸಬೇಕಿತ್ತು ಎಂದರು.

ಸಾಲ ಮನ್ನಾ: ರೈತರ ಆರ್ಥಿಕ ಪರಿಸ್ಥಿತಿಗೆ ಸಾಲ ಮನ್ನಾ ಅನಿವಾರ್ಯ. ಅಲ್ಲದೆ, ಮಹಾರಾಷ್ಟ್ರದ ಒಂದು ಜಿಲ್ಲಾ ವ್ಯಾಪ್ತಿಯಲ್ಲಿಯೇ, 108 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 10 ಕೋಟಿ ಕೃಷಿಕರಲ್ಲಿ ಅರ್ಧದಷ್ಟು ಭಾಗದ ರೈತರು ಸಾಲದಲ್ಲಿ ಸಿಲುಕಿದ್ದಾರೆ. ಹೀಗಾಗಿ, 2 ಲಕ್ಷ ರೂಪಾಯಿವರೆಗೂ ಸಾಲ ಮನ್ನಾ ಮಾಡುವುದು ಒಳ್ಳೆಯ ಬೆಳವಣಿಗೆ ಎಂದು ಚಿದಂಬರಂ ನುಡಿದರು.

ಅರ್ಥಶಾಸ್ತ್ರ ತಜ್ಞರು ಕೃಷಿ ಮಾಡಲಿ
ರೈತರ ಸಾಲ ಮನ್ನಾದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು ಎಂದು ಟೀಕಿಸುವ ಅರ್ಥಶಾಸ್ತ್ರಜ್ಞರು, 2 ಎಕರೆ ಜಮೀನು ಖರೀದಿಸಿ, ಕೃಷಿ ಚಟುವಟಿಕೆಗಳಲ್ಲಿ ತೊಡಗಲಿ, ಆಗ ಸಾಲದ ಸಂಕಷ್ಟ ತಿಳಿಯಲಿದೆ. 

-ಪಿ.ಚಿದಂಬರಂ, ಕೇಂದ್ರದ ಮಾಜಿ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News