ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಮುಷ್ಕರ: ವಹಿವಾಟು ಸ್ಥಗಿತ

Update: 2018-12-21 14:09 GMT

ಬೆಂಗಳೂರು,ಡಿ.21: ಬ್ಯಾಂಕುಗಳ ವಿಲೀನ ಖಂಡಿಸಿ ಹಾಗೂ ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಇಂದು ಬ್ಯಾಂಕ್ ನೌಕರರು ಮಷ್ಕರ ನಡೆಸಿದ್ದರಿಂದ ಬ್ಯಾಂಕ್ ವಹಿವಾಟು ಸ್ಥಗಿತಗೊಂಡು ಗ್ರಾಹಕರು ಪರದಾಡುವಂತಾಯಿತು.

ಕೇಂದ್ರ ಸರಕಾರ ಪದೇ ಪದೇ ಬ್ಯಾಂಕುಗಳನ್ನು ವಿಲೀನ ಮಾಡುವ ಮೂಲಕ ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮುಂದಾಗಿದೆ ಎಂದು ಆರೋಪಿಸಿ ಬ್ಯಾಂಕ್‌ಗಳ ನೌಕರರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಬ್ಯಾಂಕ್ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು.

ಅಂತರ್‌ರಾಷ್ಟ್ರೀಯ ಕಾರ್ಮಿಕರ ಸಂಘಟನೆ ನಿಯಮಾವಳಿಗಳ ಪ್ರಕಾರ ಕನಿಷ್ಠ ವೇತನದ ಸೂತ್ರವನ್ನು ಆಧರಿಸಿ ವೇತನ ನೀಡಬೇಕು ಎಂದು ಇದೆ. ಆದರೆ, ಕೇಂದ್ರ ಸರಕಾರ ಬ್ಯಾಂಕ್ ನೌಕರರನ್ನು ಕಡೆಗಣಿಸಿದ್ದಾರೆ. ಈ ಸಂಬಂಧ ಹಲವು ಬಾರಿ ಹೋರಾಟ, ಮುಷ್ಕರ ನಡೆಸಿದ್ದರೂ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಬ್ಯಾಂಕ್ ನೌಕರರ ಸಂಘದ ಮುಖಂಡ ಜಿ.ವಿ.ಮಣಿಮಾರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಆರಂಭವಾದ ಉದಾರೀಕರಣ, ಖಾಸಗೀಕರಣದ ಪರಿಣಾಮದಿಂದಾಗಿ 1991 ರಿಂದಲೂ ಸಾರ್ವಜನಿಕ ಬ್ಯಾಂಕ್‌ಗಳನ್ನು ಖಾಸಗಿ ಬ್ಯಾಂಕ್‌ಗಳೊಂದಿಗೆ ವಿಲೀನ ಮಾಡುವ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಇದನ್ನು ವಿರೋಧಿಸಿ ಹಲವಾರು ಭಾರಿ ಬೃಹತ್ ಮಟ್ಟದ ಎಚ್ಚರಿಕೆಗಳನ್ನು ನೀಡಿದ್ದರೂ ವಿಲೀನ ಮಾಡುವುದನ್ನು ಮುಂದುವರಿಸಲಾಗುತ್ತಿದೆ. ಅಲ್ಲದೆ, ಈಗ ಬರೋಡಾ, ದೇನಾ ಮತ್ತು ವಿಜಯಾ ಬ್ಯಾಂಕುಗಳನ್ನು ವಿಲೀನ ಮಾಡಲು ಮುಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರನ್ನಿಂಗ್ ಸ್ಕೇಲ್ ಆಫ್ ಪೇ ನಂತೆ ಒಬ್ಬ ವ್ಯಕ್ತಿ ವೃತ್ತಿ ಜೀವನ ಸ್ಥಗಿತಗೊಳ್ಳದಂತೆ ಖಚಿತ ಪಡಿಸಿಕೊಳ್ಳುವುದು. ಅಲ್ಲದೆ, ಅರ್ಹತೆಯ ಮೂಲಕ ಪ್ರಗತಿ ಸಾಧಿಸಲು ಮತ್ತು ಉತ್ತಮ ವೇತನ ಸೌಲಭ್ಯಗಳನ್ನು ಸಿಗುವ ಹಾಗೆ ಮಾಡುವುದು, ಮ್ಯಾಂಡೇಟ್ ಸಮಸ್ಯೆ ಇತ್ಯರ್ಥ ಮಾಡುವುದು ಹಾಗೂ ವೈದ್ಯಕೀಯ ವಿಮೆ ವಿಷಯದಲ್ಲಿ ಅಧಿಕಾರಿಗಳಿಗೆ ಉತ್ತಮ ಆರೋಗ್ಯ ವಿಮಾ ರಕ್ಷಣಾ ಯೋಜನೆಗಳನ್ನು ತರುವ ಉದ್ದೇಶಕ್ಕೆ ವಿರುದ್ಧವಾಗಿ ಪ್ರೀಮಿಯಂ ಮೊತ್ತವನ್ನು ಮೂರು ಬಾರಿ ಏರಿಕೆ ಮಾಡಿವೆ. ಇದನ್ನು ಕೂಡಲೇ ಪರಿಷ್ಕರಣೆ ಮಾಡಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದ್ದಾರೆ.

ಬ್ಯಾಂಕ್ ನೌಕರರ ಮುಷ್ಕರದ ಜೊತೆಗೆ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಲ್ಲಿ ಇನ್ನು ನಾಲ್ಕು ದಿನಗಳ ವವಾಟು ಸಂಪೂರ್ಣ ಸ್ಥಗಿತಗೊಳ್ಳುವುದರಿಂದ ಗ್ರಾಹಕರು ಪರದಾಡುವ ಸ್ಥಿತಿ ಉಂಟಾಗಿದೆ. ಎಟಿಎಂಗಳ ಬಳಿ ಹಣಕ್ಕಾಗಿ ಕ್ಯೂ ನಿಂತಿರುವುದು ಸಾಮಾನ್ಯವಾಗಿದೆ. ಡಿ.22 ನಾಲ್ಕನೆ ಶನಿವಾರದ ರಜೆ, ಡಿ. 23 ರವಿವಾರ, ಡಿ. 25 ಕ್ರಿಸ್‌ಮಸ್ ರಜೆ ಇದೆ. ಸಾಲು ರಜೆಗಳಿರುವುದರಿಂದ ಬಹುತೇಕ ಬ್ಯಾಂಕಿನ ಕೆಲಸಗಳು ಸಾಧ್ಯವಾಗುವುದಿಲ್ಲ ಎಂದ ತಿಳಿದ ಗ್ರಾಹಕರು ಎಟಿಎಂಗಳ ಮೊರೆ ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News