ದಾಖಲೆಯಿಲ್ಲದೆ ದಾಸ್ತಾನು ಮಾಡಿದ್ದ 12 ಕೋಟಿ ರೂ. ಮೌಲ್ಯದ ಅಡಿಕೆ ಜಪ್ತಿ
ಬೆಂಗಳೂರು, ಡಿ.21: ಗೋದಾಮುವೊಂದರಲ್ಲಿ ದಾಖಲಾತಿಗಳಿಲ್ಲದೆ ದಾಸ್ತಾನು ಮಾಡಿದ್ದ 12 ಕೋಟಿ ರೂ.ಮೌಲ್ಯದ ಅಡಿಕೆಯನ್ನು ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯು ಪತ್ತೆ ಹಚ್ಚಿ 72 ಲಕ್ಷ ರೂ. ತೆರಿಗೆ ಹಾಗೂ ದಂಡದ ರೂಪದಲ್ಲಿ ಕಟ್ಟಿಸಿಕೊಂಡು ಗೋದಾಮು ಜಪ್ತಿ ಮಾಡಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಲಯದ ಅಪರ ಆಯುಕ್ತ ನಿತೇಶ್ ಪಾಟೀಲ್ ಅವರ ನೇತೃತ್ವದ ಅಧಿಕಾರಿಗಳ ತಂಡ ಖಚಿತ ಮಾಹಿತಿ ಮೇರೆಗೆ ತುಮಕೂರಿನ ಅಂತರಸನಹಳ್ಳಿಯಲ್ಲಿರುವ ಗೋದಾಮುಗಳ ಮೇಲೆ ದಾಳಿ ಮಾಡಿ ಎರಡು ಗೋದಾಮುಗಳಲ್ಲಿ ಯಾವುದೇ ದಾಖಲಾತಿಗಳಿಲ್ಲದೆ ಸಂಗ್ರಹಿಸಲಾಗಿದ್ದ 12 ಕೋಟಿ ರೂ.ಮೌಲ್ಯದ ಅಡಿಕೆಯನ್ನು ಪತ್ತೆ ಹಚ್ಚಿದೆ ಎಂದು ತಿಳಿದುಬಂದಿದೆ.
ದಾಳಿ ನಡೆಸಿದ ಗೋದಾಮುಗಳ ಮೇಲೆ ಯಾವುದೇ ನಾಮಫಲಕಗಳನ್ನು ಅಳವಡಿಸಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಪ್ರಾರಂಭದಲ್ಲಿ ಅಲ್ಲಿನ ಕೆಲಸಗಾರರು ಹಾಗೂ ಮಾಲಕರು ಇದೊಂದು ರೈಸ್‌ಮಿಲ್. ಇಲ್ಲಿ ಭತ್ತವನ್ನು ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದ್ದರಲ್ಲದೆ, ಅಧಿಕಾರಿಗಳನ್ನು ಒಳಗೆ ಬಿಡದೆ ತಡೆದಿದ್ದರು ಎಂದು ಹೇಳಲಾಗುತ್ತಿದೆ.
ಅಧಿಕಾರಿಗಳು ಅಧಿಕೃತ ಪತ್ರದೊಂದಿಗೆ ಗೋದಾಮುಗಳ ಒಳಗೆ ಪ್ರವೇಶಿಸಿ ಪರಿಶೀಲಿಸಿದಾಗ ಬೃಹತ್ ಪ್ರಮಾಣದಲ್ಲಿ ಅಡಿಕೆ ದಾಸ್ತಾನು ಮಾಡಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಅಧಿಕಾರಿಗಳು 72 ಲಕ್ಷ ರೂ.ಗಳನ್ನು ತೆರಿಗೆ ಹಾಗೂ ದಂಡದ ರೂಪದಲ್ಲಿ ವಸೂಲಿ ಮಾಡಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.