×
Ad

ಸಂಸ್ಕೃತ ಶಾಲಾ ಶಿಕ್ಷಕರ ಸಂಘದ ಕಟ್ಟಡದ ಬಗ್ಗೆ ಚರ್ಚಿಸಿ ಕ್ರಮ: ಬಿಬಿಎಂಪಿ ಮೇಯರ್ ಗಂಗಾಂಬಿಕೆ

Update: 2018-12-21 20:02 IST

ಬೆಂಗಳೂರು, ಡಿ.21: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಸ್ಕೃತ ಶಾಲಾ ಶಿಕ್ಷಕರ ಸಂಘಕ್ಕೆ ಅಗತ್ಯವಿರುವ ಕಟ್ಟಡ ನೀಡುವ ಸಂಬಂಧ ಚರ್ಚಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಭರವಸೆ ನೀಡಿದ್ದಾರೆ.

ರಾಜ್ಯ ಸಂಸ್ಕೃತ ಪಾಠ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಕಟ್ಟಡಕ್ಕೆ ಸಂಬಂಧಿಸಿದಂತೆ ಸಂಘದಿಂದಲೇ ಸ್ಥಳವನ್ನು ಸೂಚಿಸಿದರೆ ಅದನ್ನು ಪರಿಶೀಲನೆ ಮಾಡಿ ಕ್ರಮಕ್ಕೆ ಸೂಚಿಸಲಾಗುತ್ತದೆ ಎಂದು ಹೇಳಿದರು.

ಸಂಸ್ಕೃತವು ವಿಶ್ವದ ಭಾಷೆಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಬೇರೆ ಭಾಷೆಗಳು ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತಗೊಂಡಿದ್ದರೆ ಸಂಸ್ಕೃತ ಇಡೀ ವಿಶ್ವದೆಲ್ಲೆಡೆ ಪಸರಿಸಿದೆ. ಸಂಸ್ಕೃತ ಕಲಿಯದಿರುವ ಬಗ್ಗೆ ಇಂದು ನನಗೆ ನೋವು ಉಂಟಾಗಿದೆ. ಭಾಷೆಯ ದಾಟಿ ಪದಗಳ ಉಚ್ಛಾರಣೆಯಲ್ಲಿರುವ ಆಕರ್ಷಣೆ ಕೇಳಿದ ನಂತರ ಸಂಸ್ಕೃತ ಕಲಿಯಬೇಕಿತ್ತು ಎನಿಸುತ್ತಿದೆ ಎಂದರು.

ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪದ್ಮಾಶೇಖರ್ ಮಾತನಾಡಿ, ಸಂಸ್ಕೃತ ಭಾಷೆಗೆ ವಿಶ್ವ ಮಾನ್ಯತೆ ಇದೆ. ಶಿಕ್ಷಕರು ಸಂಸ್ಕೃತ ಕುರಿತಂತೆ ಮಕ್ಕಳಲ್ಲಿ ಅಭಿರುಚಿ ಬೆಳೆಸಬೇಕು. ಪ್ರಾಥಮಿಕ ಹಂತದಿಂದಲೇ ಉತ್ತಮ ಶಿಕ್ಷಣ ನೀಡಿ ಸಂಸ್ಕೃತದ ಭಾಷೆ ಅಭಿವ್ಯಕ್ತಿಗೆ ಉತ್ತರ ನೀಡುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆರನ್ನು ಸಂಘದಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಿದ್ದಲಿಂಗ ಮಹಾಸ್ವಾಮಿಗಳು, ಇಮ್ಮಡಿ ನಿಜಗುಣ ಮಹಾಸ್ವಾಮಿ, ಬಿಬಿಎಂಪಿ ಸದಸ್ಯ ರಮೇಶ್, ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ, ಕಾರ್ಯದರ್ಶಿ ಎಚ್.ಎನ್.ರಾಮಕೃಷ್ಣಯ್ಯ ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News