ಸಂಪುಟ ವಿಸ್ತರಣೆಗೆ ಕೊನೆಗೂ ಒಪ್ಪಿಗೆ: ಯಾರು ಒಳಗೆ ? ಯಾರು ಹೊರಗೆ ?

Update: 2018-12-21 14:56 GMT

ಹೊಸದಿಲ್ಲಿ/ಬೆಂಗಳೂರು, ಡಿ. 21: ಮೈತ್ರಿ ಸರಕಾರದ ಸಂಪುಟದಲ್ಲಿ ಖಾಲಿ ಇರುವ ಕಾಂಗ್ರೆಸ್ ಪಾಲಿನ 6 ಸ್ಥಾನಗಳ ಭರ್ತಿ ಮತ್ತು ಕೆಲವರ ಖಾತೆ ಬದಲಾವಣೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧರಿಸಿದ್ದು, ಸಚಿವರಾದ ರಮೇಶ್ ಜಾರಕಿಹೊಳಿ, ಆರ್.ಶಂಕರ್ ಅವರನ್ನು ಕೈಬಿಡುವ ತೀರ್ಮಾನ ಕೈಗೊಂಡಿದ್ದಾರೆ.

ಶುಕ್ರವಾರ ದಿಲ್ಲಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಜತೆ ಚರ್ಚಿಸಿದ್ದು, ಸಚಿವ ಸ್ಥಾನಕಾಂಕ್ಷಿಗಳ ಪಟ್ಟಿಗೆ ಒಪ್ಪಿಗೆ ನೀಡಿದ್ದಾರೆಂದು ಗೊತ್ತಾಗಿದೆ.

ರಾಹುಲ್ ಗಾಂಧಿಯವರೊಂದಿಗೆ ಶುಕ್ರವಾರ ರಾತ್ರಿ ಸಮಾಲೋಚನೆ ನಡೆಸಿದ ರಾಜ್ಯದ ಮುಖಂಡರು, ರಮೇಶ್ ಜಾರಕಿಹೊಳಿ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರಿಗೆ, ಆರ್.ಶಂಕರ್ ಅವರ ಸ್ಥಾನವನ್ನು ಶಾಸಕ ಎಂಟಿಬಿ ನಾಗರಾಜ್ ಅವರಿಗೆ ನೀಡಲು ನಿರ್ಧರಿಸಿದ್ದಾರೆ. ಮುಸ್ಲಿಂ ಸಮುದಾಯದ ರಹೀಂ ಖಾನ್ ಮತ್ತು ಉತ್ತರ ಕರ್ನಾಟಕ ಭಾಗದ ಸಿ.ಎಸ್.ಶಿವಳ್ಳಿ ಅವರಿಗೆ ಸಚಿವ ಸ್ಥಾನ ದಕ್ಕಲಿದೆ.

ನಾಳೆ(ಡಿ.22) ಸಂಪುಟ ವಿಸ್ತರಣೆಯಾಗಲಿದೆ ಎಂಬ ಎಲ್ಲರ ನಿರೀಕ್ಷೆಗೆ ಉತ್ತರ ಸಿಕ್ಕಿದ್ದು, ಸಚಿವ ಸ್ಥಾನ ಸಿಕ್ಕವರಲ್ಲಿ ಉತ್ಸಾಹ ಮನೆ ಮಾಡಿದೆ. ಮುಂಬರುವ ಲೋಕಸಭೆ ಹಿನ್ನೆಲೆಯಲ್ಲಿ ಪಕ್ಷದಲ್ಲಿನ ಅಸಮಾಧಾನ ಉಂಟಾಗದಂತೆ ಎಚ್ಚರ ವಹಿಸಲು ಜಿಲ್ಲಾವಾರು, ಜಾತಿವಾರು ಪ್ರಾತಿನಿಧ್ಯ ಕಲ್ಪಿಸಲು ಮುಖಂಡರು ತೀರ್ಮಾನಿಸಿದ್ದಾರೆ.

ಇದೇ ವೇಳೆ ಹತ್ತು ಮಂದಿ ಸಂಸದೀಯ ಕಾರ್ಯದರ್ಶಿಗಳ ನೇಮಕ ಹಾಗೂ 30 ಪ್ರಮುಖ ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಸಂಬಂಧವೂ ಮಾತುಕತೆ ನಡೆಸಲಿದ್ದು, ಯಾರಿಗೆ ಸ್ಥಾನಮಾನ ಸಿಗಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News