ಅಝರುದ್ದೀನ್ ಬಳಿಕ ಕ್ರಿಕೆಟ್‌ಗೆ ಹೈದರಾಬಾದ್‌ನ ಅತಿ ದೊಡ್ಡ ಕೊಡುಗೆ ವಿವಿಎಸ್ ಲಕ್ಷ್ಮಣ್: ರಾಹುಲ್ ದ್ರಾವಿಡ್

Update: 2018-12-21 16:04 GMT

ಬೆಂಗಳೂರು, ಡಿ.21: ಭಾರತೀಯ ಕ್ರಿಕೆಟ್ ರಂಗಕ್ಕೆ ಅಝರುದ್ದೀನ್ ನಂತರ ಹೈದರಾಬಾದ್‌ನ ಅತಿ ದೊಡ್ಡ ಕೊಡುಗೆ ವಿವಿಎಸ್ ಲಕ್ಷ್ಮಣ್ ಎಂದು ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಅಭಿಪ್ರಾಯಿಸಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ವಿವಿಎಸ್ ಲಕ್ಷ್ಮಣ್‌ರವರ ಆತ್ಮಚರಿತ್ರೆ ‘281 ಅಂಡ್ ಬಿಯಾಂಡ್’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿವಿಎಸ್ ಲಕ್ಷ್ಮಣ್ 19 ವರ್ಷ ವಯಸ್ಸಿನ ಒಳಗಿನ ತಂಡದಲ್ಲಿ ಆಡುತ್ತಿದ್ದಾಗಲೆ ಸಾಕಷ್ಟು ಖ್ಯಾತಿ ಪಡೆದಿದ್ದರು. ನನಗೆ ಅವರ ಆಟವನ್ನು ವೀಕ್ಷಿಸಲು ಅವಕಾಶ ದೊರೆಯುತ್ತಿದ್ದುದು ಅದ್ಭುತ ಅನುಭವವಾಗಿದೆ ಎಂದರು.

ಮಾಜಿ ಕ್ರಿಕೆಟ್ ಪಟು ಜಾವಗಲ್ ಶ್ರೀನಾಥ್ ಮಾತನಾಡಿ, ಲಕ್ಷ್ಮಣ್ ಅವರೊಂದಿಗೆ ನನ್ನ ಮೊದಲ ಟೆಸ್ಟ್ ಪಂದ್ಯ ಅದ್ಭುತವಾಗಿತ್ತು. ಪಂದ್ಯದ ಉದ್ದಕ್ಕೂ ಅವರ ವಿಶ್ವಾಸವನ್ನು ನಾನು ಗಮನಿಸಿ ರೋಮಾಂಚನಗೊಳ್ಳುತ್ತಿದ್ದೆ. ಅವರಿಗೆ ಕ್ರಿಕೆಟ್ ಮೇಲಿರುವ ಪ್ರೀತಿ ಯುವ ಕ್ರಿಕೆಟ್‌ಗರಿಗೆ ಮಾದರಿಯಾಗಲಿ ಎಂದರು.

ವಿವಿಎಸ್ ಲಕ್ಷ್ಮಣ್ ಅವರ ಆತ್ಮಚರಿತ್ರೆ ದಿಟ್ಟತನದಿಂದ ಕೂಡಿದ್ದು, ಆಳವಾದ ಒಳನೋಟಗಳನ್ನು ಹೊಂದಿದೆ. ಅವರ ಡ್ರೆಸ್ಸಿಂಗ್ ರೂಮ್ ಹಾಸ್ಯಗಳನ್ನು ಹಾಗೂ ಷಾಂಪೇನ್ ಸಂಜೆಗಳ ರೋಮಾಂಚನಗಳನ್ನು ರಸವತ್ತಾಗಿ ಬರೆದಿದ್ದಾರೆ. ವಿಶ್ವದ ಅತ್ಯುತ್ತಮ ತಂಡಗಳೆದುರು ಆಟವಾಡುತ್ತಿರುವಾಗ ಇದ್ದ ಸಂತೋಷ, ವೈವಿಧ್ಯಮಯ ಬ್ಯಾಟಿಂಗ್ ಶೈಲಿ, ಬದಲಾವಣೆಗಳು, ವಿವಿಧ ಪಿಚ್‌ಗಳ ಸ್ವರೂಪ, ಜಾನ್ ರೈಟ್ ಮತ್ತು ಗ್ರೆಗ್ ಚಾಪೆಲ್ ಜೊತೆ ಕಲಿತ ವಿಷಯಗಳ ಬಗ್ಗೆ ಬರೆದಿದ್ದಾರೆ ಎಂದು ಅವರು ಹೇಳಿದರು.

ವಿವಿಎಸ್ ಲಕ್ಷ್ಮಣ್ ಮಾತನಾಡಿ, ದ್ರಾವಿಡ್ ಜೊತೆ ಈಡನ್ ಗಾರ್ಡನ್‌ನಲ್ಲಿ ಆಡಿದ ದಿನವನ್ನು ಮರೆಯಲಾರೆ. ಆ ದಿನ ಗೆಲುವಿಗಾಗಿ ದೊಡ್ಡ ಮಟ್ಟದ ರನ್‌ಗಳ ಗುರಿ ಮುಟ್ಟಬೇಕಾಗಿತ್ತು. ಆ ದಿನ ನಾವು ಪ್ರತಿಯೊಂದು ಬಾಲ್ ಅನ್ನೂ ಯೋಚಿಸಿ ಆಡಿದೆವು ಎಂದು ಸ್ಮರಿಸಿ ಸಂತಸ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News