ರಾಜ್ಯಪಾಲರಿಗೆ ಸಂಕಟ ತಂದ ರಾಜಧಾನಿ ಬೆಕ್ಕುಗಳು: ತಕ್ಷಣ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಪತ್ರ

Update: 2018-12-21 16:18 GMT

ಬೆಂಗಳೂರು, ಡಿ.21: ರಾಜ್ಯಪಾಲರಿಗೆ ಹಾಗೂ ಅವರನ್ನು ಭೇಟಿಯಾಗಲು ಬರುವ ಗಣ್ಯರಿಗೆ 25ಕ್ಕೂ ಹೆಚ್ಚು ಬೆಕ್ಕುಗಳು ತೊಂದರೆ ಉಂಟು ಮಾಡುತ್ತಿದ್ದು, ಅವುಗಳನ್ನು ಹಿಡಿಯುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ.

ಬೆಕ್ಕುಗಳು ರಾಜಭವನದ ಪ್ರಶಾಂತ ವಾತಾವರಣವನ್ನು ಹಾಳು ಮಾಡುತ್ತಿದ್ದು, ರಾಜ್ಯಪಾಲರಿಗೆ ರಾತ್ರಿ ನಿದ್ದೆ ಮಾಡಲು ಬಿಡುತ್ತಿಲ್ಲವಂತೆ. ಅವರು ತಮ್ಮ ನಾಯಿಯೊಂದಿಗೆ ವಾಯು ವಿಹಾರಕ್ಕೆ ಹೋಗುವಾಗಲೂ ತೊಂದರೆ ಕೊಡುತ್ತಿವೆ. ಅಲ್ಲದೆ, ಬೆಕ್ಕುಗಳಿಂದಾಗಿ ಗಣ್ಯರ ಸಭಾಂಗಣ ಹಾಗೂ ಖಾಸಗಿ ನಿವಾಸ ಗಲೀಜಾಗಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ.

ಬೆಕ್ಕಿನ ಕಾಟವನ್ನು ತಡೆಯಲು ವಿಫಲವಾದ ಕಾರಣ ಮೇಲಧಿಕಾರಿಗಳ ಕೋಪಕ್ಕೆ ಗುರಿಯಾದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಆನಂದ್ ಅವರು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ, ರಾಜಭವನದ ಸನ್ನಿವೇಶವನ್ನು ಅವಲೋಕಿಸಲು ತೆರಳಿದ ಬಿಬಿಎಂಪಿ ಅಧಿಕಾರಿಗಳು ಅವುಗಳು ಸಾಕಿದ ಬೆಕ್ಕುಗಳಲ್ಲ. ಅವುಗಳನ್ನು ಹಿಡಿಯಲು ಅರಣ್ಯ ಇಲಾಖೆಯ ನೆರವಿನ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ತಪಾಸಣೆಗೆ ಹೋದಾಗ ಕೆಲವು ಮರಗಳ ಮೇಲೆ ಕುಳಿತಿದ್ದವು. ಇನ್ನೂ ಕೆಲವು ಉದ್ಯಾನದ ಪೊದೆಯಲ್ಲಿದ್ದವು. ಹೀಗಾಗಿ, ಪರಿಣಿತರನ್ನು ಕರೆಯಿಸುತ್ತೇವೆ. ಅವರು ಬೆಕ್ಕುಗಳ ವರ್ತನೆಯನ್ನು ಅಧ್ಯಯನ ಮಾಡಿ ಹಿಡಿಯಲು ಕೆಲವು ದಿನ ಬೇಕಾಗುತ್ತದೆ. ನಮಗೆ ನಾಯಿಗಳು ಹಿಡಿಯುವುದು ಗೊತ್ತು. ಬೆಕ್ಕುಗಳನ್ನು ಹಿಡಿದ ಅನುಭವವಿಲ್ಲ. ಬಹುತೇಕ ಬೆಕ್ಕುಗಳು ವಿಶೇಷ ತಳಿಯವು. ಸುತ್ತಮುತ್ತಲ ಪ್ರದೇಶದಿಂದ ರಾಜಭವನಕ್ಕೆ ಬಂದಿರಬಹುದು. ಅವುಗಳನ್ನು ಹಿಡಿಯಲು ಹೋದಾಗ ಕ್ಷಣ ಮಾತ್ರದಲ್ಲಿಯೇ ತಪ್ಪಿಸಿಕೊಂಡು ಹೋಗುತ್ತವೆ ಎಂದು ಬೀದಿ ನಾಯಿಗಳನ್ನು ಹಿಡಿಯುವ ಬಿಬಿಎಂಪಿ ತಂಡ ಹೇಳಿದೆ.

ಬೀದಿ ನಾಯಿಗಳನ್ನು ಹಿಡಿಯುವ ಬಿಬಿಎಂಪಿ ತಂಡ, ಬೆಕ್ಕುಗಳನ್ನು ಹಿಡಿಯಲು ಹೆಣಗಾಡುತ್ತಿದೆ. ಬೆಕ್ಕಿನ ವರ್ತನೆಗಳನ್ನು ಅಧ್ಯಯನ ಮಾಡಿ ಪುಲಾಯಿಸಿ ಹಿಡಿಯುವ ತಜ್ಞರ ತಂಡವನ್ನು ನಿಯೋಜಿಸಲು ಅದು ಮುಂದಾಗಿದ್ದು, ಅವುಗಳನ್ನು ಹಿಡಿದು ಪುನರ್ವಸತಿ ಕಲ್ಪಿಸಲು ಚಿಂತನೆ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News