×
Ad

ಶಾಲೆಗಳ ಟಿಂಕರಿಂಗ್ ಲ್ಯಾಬ್ ಉಪಯೋಗಿಸಿ: ರಮಣನ್ ರಾಮನಾಥನ್

Update: 2018-12-21 22:18 IST

ಬೆಂಗಳೂರು, ಡಿ.21: ಮಕ್ಕಳ ಕುತೂಹಲ ಮತ್ತು ಆವಿಷ್ಕಾರದ ಪ್ರವೃತ್ತಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಶಾಲೆಗಳಿಗೆ ಅಟಲ್ ಟಿಂಕರಿಂಗ್ ಲ್ಯಾಬ್ ಒದಗಿಸಿದ್ದು, ಇದರ ಉಪಯೋಗ ಆಗಬೇಕು ಎಂದು ಕೇಂದ್ರದ ನೀತಿ ಆಯೋಗ ಮತ್ತು ಅಟಲ್ ಇನ್ನೋವೇಷನ್ ಮಿಷನ್ ನಿರ್ದೇಶಕ ರಮಣನ್ ರಾಮನಾಥನ್ ತಿಳಿಸಿದರು.

ಶುಕ್ರವಾರ ಇಲ್ಲಿನ ಇಂದಿರಾನಗರದ ನ್ಯೂ ಹಾರಿಝನ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ, ಅಟಲ್ ಟಿಂಕರಿಂಗ್ ಲ್ಯಾಬ್(ಎಟಿಎಲ್) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳಲ್ಲಿ ಸಂಶೋಧನಾ ಹಾಗೂ ಹೊಸತರ ಆವಿಷ್ಕರಿಸುವ ಮನೋಭಾವವನ್ನು ಉತ್ತೇಜಿಸಲು ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಈ ಲ್ಯಾಬ್ ಅನ್ನು ಶಾಲಾ ಆವರಣದಲ್ಲಿ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ವಿಜ್ಞಾನ, ತಂತ್ರಜ್ಞಾನ, ಇಂಜನಿಯರಿಂಗ್ ಹಾಗೂ ಗಣಿತದ ಕುರಿತು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಲ್ಯಾಬ್‌ನಲ್ಲಿರುವ ಉಪಕರಣಗಳು ನೆರವಾಗುತ್ತವೆ. ಈ ಲ್ಯಾಬ್ ನಿರ್ಮಾಣಕ್ಕೆ ಕೇಂದ್ರ ಸರಕಾರವು 20 ಲಕ್ಷ ನೆರವು ನೀಡಿದೆ ಎಂದು ತಿಳಿಸಿದರು. ಮಕ್ಕಳಿಗೆ ಇದನ್ನೇ ಮಾಡಿ ಎಂದು ಸೂಚನೆ ನೀಡದೆ, ಅವರನ್ನು ಸ್ವತಂತ್ರವಾಗಿ ಬಿಟ್ಟು ಹೊಸ ಪ್ರಯೋಗ ಮಾಡಲು ಅವಕಾಶ ನೀಡುವ ವಾತಾವರಣ ಸೃಷ್ಟಿಯಾಗಬೇಕು. ಶಾಲೆಯೊಂದು ಅಭಿವೃದ್ಧಿಯಾಗಿದ್ದರೆ, ಅದಕ್ಕೆ ಕಾರಣ ಶ್ರಮ ಹಾಗೂ ಶಿಕ್ಷಕರ ಕಾಳಜಿ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಮುಖ್ಯಸ್ಥೆ ಸಂಧ್ಯಾ ರಾಮನ್ ಮಾತನಾಡಿ, ಸುಮಾರು 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಈ ಶಾಲೆಗೆ ಸುಸಜ್ಜಿತ ಲ್ಯಾಬ್ ಕೊರತೆ ಇತ್ತು. ಹೀಗಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಲ್ಯಾಬ್ ನಿರ್ಮಿಸಲಾಗಿದೆ. ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಇದರಿಂದ ಉಪಯೋಗವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ಕೈ ಸಂಸ್ಥೆ ನಿರ್ದೇಶಕ ಮಿತ್ ಮುಖಿಝಾ, ಶಾಲೆಯ ಆರ್.ಜಯಂತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News