×
Ad

ಬೆಳೆ ಸಾಲ ಮನ್ನಾ: ವಾಣಿಜ್ಯ ಬ್ಯಾಂಕ್‍ಗಳಲ್ಲಿ ಹೆಸರು ನೋಂದಣಿಗೆ ಮನವಿ

Update: 2018-12-21 22:43 IST

ಬೆಂಗಳೂರು, ಡಿ. 21: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಪಡೆದ ರೈತರು ಬೆಳೆ ಸಾಲ ಮನ್ನಾ ಯೋಜನೆಯ ಲಾಭ ಪಡೆಯಲು ಸಂಬಂಧಿತ ಬ್ಯಾಂಕ್ ಶಾಖೆಗಳಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಜನವರಿ 10 ರೊಳಗೆ ತಮ್ಮ ಹೆಸರು ಹಾಗೂ ವಿವರಗಳನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಬಿಎಂ ವಿಜಯಶಂಕರ್ ಅವರು ಅರ್ಹ ರೈತರಲ್ಲಿ ಮನವಿ ಮಾಡಿದ್ದಾರೆ.

ಸುಸ್ತಿ ಸಾಲ, ಪುನರಾವರ್ತಿ ಸಾಲ, ಅನುತ್ಪಾದಕ ಆಸ್ತಿ ಸಾಲಗಳನ್ನು ಒಳಗೊಂಡಂತೆ 2009 ರ ಎಪ್ರಿಲ್ 1 ರಿಂದ 2017 ರ ಡಿ.31 ರವರೆಗೆ ವಾಣಿಜ್ಯ ಬ್ಯಾಂಕ್‍ಗಳಲ್ಲಿ ಬಾಕಿ ಇರುವ ರೈತರ ಬೆಳೆ ಸಾಲಗಳ ನೋಂದಣಿ ಪ್ರಕ್ರಿಯೆಗೆ ಇದೀಗ ಚಾಲನೆ ನೀಡಲಾಗಿದೆ. ಹೀಗಾಗಿ, 2017 ರ ಡಿ.31 ರೊಳಗಾಗಿ  ವಾಣಿಜ್ಯ ಬ್ಯಾಂಕ್‍ಗಳಲ್ಲಿ ಬೆಳೆ ಸಾಲ ಪಡೆದ ರೈತರು ಸ್ವಯಂ ದೃಢೀಕರಣ ಪತ್ರದೊಂದಿಗೆ ತಮ್ಮ ಆಧಾರ್ ಕಾರ್ಡ್ ಮತ್ತು ಪ್ರಸಕ್ತ ಸಾಲಿನ ಜುಲೈ 5 ರೊಳಗೆ ಪಡೆದ ತಮ್ಮ ಪಡಿತರ ಚೀಟಿಯ ನಕಲು ಪ್ರತಿ ಹಾಗೂ ಸಾಲ ಪಡೆದ ಜಮೀನಿನ ಸರ್ವೇಕ್ಷಣಾ ಸಂಖ್ಯೆಯ ಮಾಹಿತಿಯನ್ನು ಬ್ಯಾಂಕ್‍ನ ಕಾರ್ಯ ವೇಳೆಯಲ್ಲಿ ಸಲ್ಲಿಸಿ ಈ ಬೆಳೆ ಸಾಲ ಮನ್ನಾ ಯೋಜನೆಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಈ ನೋಂದಣಿ ಸಂದರ್ಭದಲ್ಲಿ ಜಮೀನಿಗೆ ಸಂಬಂಧಿಸಿದ ಪಹಣಿಯ ಪ್ರತಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಒಂದು ಬ್ಯಾಂಕ್ ಶಾಖೆಯಲ್ಲಿ ಪ್ರತಿದಿನ ಗರಿಷ್ಠ 40 ರೈತರ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ನಂತರ, ಆಗಮಿಸುವ ರೈತರಿಗೆ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿ ಟೋಕನ್‍ಗಳನ್ನು ನೀಡಿ ನೋಂದಣಿಗೆ ಅನುವುಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.  

ಯೋಜನೆಯ ಲಾಭ ಪಡೆಯಲು ಅವಶ್ಯಕತೆ ಇರುವ ಅರ್ಹತೆಗಳು
ಕೇವಲ ವೈಯಕ್ತಿಕ ಬೆಳೆ ಸಾಲ ಪಡೆದ ರೈತರು ಮಾತ್ರ ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ. ಗಂಡ, ಹೆಂಡತಿ, ಅವಲಂಬಿತ ಮಕ್ಕಳು ಒಳಗೊಂಡಂತೆ ಒಂದು ಕುಟುಂಬಕ್ಕೆ ಗರಿಷ್ಠ ಎರಡು ಲಕ್ಷ ರೂವರೆಗೆ ಮಾತ್ರ ಬೆಳೆ ಸಾಲ ಮನ್ನಾ ಪಡೆಯಲು ಅವಕಾಶವಿದೆ. ವಾರ್ಷಿಕ ಆದಾಯ ತೆರಿಗೆ ಪಾವತಿಸುವ, ಕೇಂದ್ರ ಸರ್ಕಾರದ, ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಸೇವೆಯಲ್ಲಿರುವ, ಸರ್ಕಾರದ ಅನುದಾನಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಾಹೆಯಾನ 15,000 ರೂ. ಗಳಿಗಿಂತಲೂ ಹೆಚ್ಚು ಪಿಂಚಣಿ ಪಡೆಯುವವರಿಗೆ ಈ ಯೋಜನೆಯ ಲಾಭ ದೊರೆಯುವುದಿಲ್ಲ. ಆದರೆ, ಈ ಯೋಜನೆಯ ಲಾಭ ಪಡೆಯಲು ಮಾಜಿ ಸೈನಿಕರಿಗೆ ಅವಕಾಶವಿದೆ. ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ ಫಲಾನುಭವಿಗಳು, ವಾಣಿಜ್ಯ ಬ್ಯಾಂಕ್ ಬೆಳೆ ಸಾಲ ಮನ್ನಾಕ್ಕೆ ಅರ್ಹರಲ್ಲ.

ಪ್ರತಿ ಬ್ಯಾಂಕ್ ಶಾಖೆಯಲ್ಲಿ ರೈತರ ನೆರವಿಗಾಗಿ ಗ್ರಾಮ ಲೆಕ್ಕಾಧಿಕಾರಿಯನ್ನು ನಿಯೋಜಿಸಲಾಗಿದೆ. ಅರ್ಹ ಮತ್ತು ಆಸಕ್ತ ರೈತರು ಹೆಚ್ಚಿನ ವಿವರಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯವಾಣಿ ಸಂಖ್ಯೆ 080 - 2221 1106 ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News