ಮಣಿಪುರ ಪತ್ರಕರ್ತನ ಅಪೀಲಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ, ರಾಜ್ಯ ಸರಕಾರಗಳಿಗೆ ಹೈಕೋರ್ಟ್ ಸೂಚನೆ

Update: 2018-12-22 09:09 GMT

ಇಂಫಾಲ್, ಡಿ.22: ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಬಂಧಿತರಾಗಿರುವ ಮಣಿಪುರದ ಪತ್ರಕರ್ತ ಕಿಶೋರ್ ಚಂದ್ರ ವಾಂಗ್ಖೆಂ ಅವರು ತಮ್ಮ ಬಂಧನವನ್ನು ಪ್ರಶ್ನಿಸಿ ಹಾಗೂ ಬಿಡುಗಡೆ ಕೋರಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆಯಾಗಿ ಫೆಬ್ರವರಿ 1ರೊಳಗಾಗಿ ಅಫಿದಾವಿತ್ ಸಲ್ಲಿಸುವಂತೆ ಮಣಿಪುರ ಹೈಕೋರ್ಟ್ ಮಣಿಪುರ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಆರೆಸ್ಸೆಸ್ ಹಾಗೂ ಮಣಿಪುರ ಮುಖ್ಯಮಂತ್ರಿಯನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ನವೆಂಬರ್ 27ರಂದು ಕಿಶೋರ್‍ಚಂದ್ರ ಅವರನ್ನು ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು.

``ಅವರ ವಿರುದ್ಧ ಎನ್‍ಎಸ್‍ಎ ಅನ್ವಯ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ನಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆಯೆಂದು ಮಾರ್ಕಾಂಡೇಯ ಕಾಟ್ಜು ಹೇಳಿದ್ದಾರೆ. ಅವರನ್ನು ಆದಷ್ಟು ಬೇಗ ಬಿಡುಗಡೆಗೊಳಿಸುವಂತೆ ನ್ಯಾಯಾಲಯವನ್ನು ಕೋರಿದ್ದೇವೆ'' ಎಂದು ಕಿಶೋರ್‍ಚಂದ್ರ ಅವರ ಪತ್ನಿ ರಂಜಿತಾ ತಿಳಿಸಿದ್ದಾರೆ.

ತಮ್ಮ ಕಕ್ಷಿಗಾರನ ಬಂಧನದ ಕುರಿತು ಹಿರಿಯ ವಕೀಲ ಶ್ರೀಜಿ ಭಾವ್ಸರ್ ಅವರು ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶರಾಗಿರುವ ಕಾಟ್ಜು ಅವರಿಗೆ ಪತ್ರ ಬರೆದಿದ್ದು ಜೈಲಿನ ಅಧಿಕಾರಿಗಳು ಕಿಶೋರ್ ಚಂದ್ರರನ್ನು ಭೇಟಿಯಾಗಲು ಅವರ ಪತ್ನಿಗೂ ಅನುಮತಿಸುತ್ತಿಲ್ಲ ಎಂದು ದೂರಿದ್ದರು. ರಾಷ್ಟ್ರೀಯ ಭದ್ರತಾ ಕಾಯಿದೆಯನ್ವಯ ನೀಡಬಹುದಾದ ಗರಿಷ್ಠ 12 ತಿಂಗಳು ಜೈಲು ಶಿಕ್ಷೆಯನ್ನು ಕಿಶೋರ್‍ಚಂದ್ರ ಅವರಿಗೆ ವಿಧಿಸಲಾಗಿದೆ.

“ತಮ್ಮ ಕೃತ್ಯ ಯಾವುದೇ ರೀತಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದಿಲ್ಲ. ಹೆಚ್ಚೆಂದರೆ ಅದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರವಾಗಿರಬಹುದು'' ಎಂದು ಹೈಕೋರ್ಟಿಗೆ ಮಾಜಿ ಪತ್ರಕರ್ತನ ಪರವಾಗಿ ಸಲ್ಲಿಸಲಾದ ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ನವೆಂಬರ್ 21ರಂದು ದೇಶದ್ರೋಹದ ಆರೋಪ ಹೊರಿಸಿ ಅವರನ್ನು ಬಂಧಿಸಲಾಗಿತ್ತಾದರೂ ನವೆಂಬರ್ 25ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡ ಆವರನ್ನು ಎರಡು ದಿನಗಳ ನಂತರ ಮತ್ತೆ ಬಂಧಿಸಲಾಗಿತ್ತು.

ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯ ಜಯಂತಿಯಂದು ಸಮಾರಂಭ ಆಯೋಜಿಸಿದ್ದ ಸಿಎಂ ಬಿರೇನ್ ಸಿಂಗ್ ಅವರನ್ನು ಪ್ರಧಾನಿಯ `ಕೈಗೊಂಬೆ' ಎಂದು ಕಿಶೋರ್ ಚಂದ್ರ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ವೀಡಿಯೋದಲ್ಲಿ ಹೇಳಿದ್ದರಲ್ಲದೆ ಧೈರ್ಯವಿದ್ದರೆ ಸರಕಾರ ತನ್ನನ್ನು ಬಂಧಿಸಲಿ ಎಂದು ಸವಾಲೆಸೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News